ನಗರದ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿನ ಅಪಘಾತಗಳಿಂದ ನಾಲ್ವರು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident--02

ಬೆಂಗಳೂರು, ಮೇ 22- ನಗರದಲ್ಲಿ ರಾತ್ರಿಯಿಂದೀಚೆಗೆ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ರಾಜಾಜಿನಗರ ಸಂಚಾರಿ ಠಾಣೆ : ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಪ್ರೀತಿನಗರದ ಪವನ್‍ಕುಮಾರ್(19) ಮೃತಪಟ್ಟ ದುರ್ದೈವಿ ಯುವಕ. ಆರ್‍ಎಂಸಿ ಯಾರ್ಡ್‍ನಲ್ಲಿ ಕೆಲಸಮಾಡುತ್ತಿದ್ದ ಪವನ್‍ ಕುಮಾರ್ ಪ್ರೀತಿನಗರದ ನಿವಾಸಿಯಾಗಿದ್ದು, ಇಂದು ಬೆಳಗಿನ ಜಾವ 6.30ರಲ್ಲಿ ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದನು. ಸ್ಟುಡಿಯೋ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಸಿಲಿಂಡರ್‍ಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಲಾರಿ ಈತನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕೆಳಗೆ ಬಿದ್ದ ಪವನ್‍ಕುಮಾರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಯಲಹಂಕ: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಲಹಂಕ ನ್ಯೂಟೌನ್ ನಿವಾಸಿ ಮುನಿರಾಜು(40) ಮೃತಪಟ್ಟ ಬೈಕ್ ಸವಾರ. ರಾತ್ರಿ 10.30ರಲ್ಲಿ ಮುನಿರಾಜು ಎಂಬುವರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಅರಳಾಳಸಂದ್ರ, ತಿರುಮಲ ಡಾಬಾ ಸಮೀಪದ ದೊಡ್ಡಬಳ್ಳಾಪುರ-ಬೆಂಗಳೂರು ರಸ್ತೆಯಲ್ಲಿ ಅತಿವೇಗವಾಗಿ ಮುನ್ನುಗ್ಗಿದ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶವವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.

ಆರ್.ಟಿ.ನಗರ ಸಂಚಾರ: ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದು, ಹೆಸರು, ವಿಳಾಸ ತಿಳಿದು ಬಂದಿಲ್ಲ.ಸುಮಾರು 45ರಿಂದ 50 ವರ್ಷದಂತೆ ಕಾಣುವ ಈ ವ್ಯಕ್ತಿಯ ವಾಸಸ್ಥಳ ಹಾಗೂ ಚಹರೆ ತಿಳಿದು ಬಂದಿಲ್ಲ. ರಾತ್ರಿ 11.40ರಲ್ಲಿ ಬಿ.ಬಿ.ರಸ್ತೆಯ ಸಿಬಿಐ ಬಸ್ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಈ ಪಾದಚಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದೆ.

ಸದಾಶಿವನಗರ: ಸೈಕಲ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಅತಿವೇಗವಾಗಿ ಮುನ್ನುಗ್ಗಿದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಕೆಂಪಾಪುರ ಅಗ್ರಹಾರದ ಚಿರಂಜೀವಿನಗರ ನಿವಾಸಿ ಶೇಖ್‍ಕಾಲು(59) , ಮೃತಪಟ್ಟ ಸೈಕಲ್ ಸವಾರ. ಇಂದು ಬೆಳಗಿನ ಜಾವ 1.10ರಲ್ಲಿ ರಾಮಯ್ಯ ಆಸ್ಪತ್ರೆಯ ಗೇಟ್ ನಂ.7ರ ಮುಂಬಾಗ ಶೇಖಕಾಲು ಅವರು ಸೈಕಲ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಬಿಸಿದೆ. ಅಪಘಾತವೆಸಗಿದ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದನೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin