ಬೆಂಗಳೂರಲ್ಲಿ ಹಾಡಹಗಲೇ ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

firing

ಬೆಂಗಳೂರು, ಮೇ 22- ಹಾಡಹಗಲೇ ಪೀಠೋಪಕರಣ ಉದ್ಯಮಿ ಮಸೂದ್ ಅಲಿ ಎಂಬುವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಪೂರ್ವ ವಿಭಾಗದ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಈ ತಂಡಗಳು ಈಗಾಗಲೇ ತನಿಖೆ ಆರಂಭಿಸಿವೆ. ಮಸೂದ್ ಅಲಿ ಅವರು ಹಣಕಾಸು ವಿಚಾರವಾಗಿ ಕೆಲವರೊಂದಿಗೆ ಮನಸ್ತಾಪ ಹೊಂದಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಿಗಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತ್ತ ಗುಂಡಿನ ದಾಳಿಗೆ ಒಳಗಾಗಿದ್ದ ಮಸೂದ್ ಅಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:
ಪೀಠೋಪಕರಣ ಉದ್ಯಮಿಯಾಗಿರುವ ಮಸೂದ್ ಅಲಿ ಎಂಬುವರು ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಮಳಿಗೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಇಬ್ಬರು ದುಷ್ಕರ್ಮಿಗಳು ಇವರ ಕಾರನ್ನು ಅಡ್ಡಗಟ್ಟಿ ಏಕಾಏಕಿ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣ ಮಸೂದ್ ಅಲಿ ಅವರನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಅಲಿ ಅವರ ಬೆನ್ನಿಗೆ ಹೊಕ್ಕಿದ್ದ ಗುಂಡನ್ನು ತೆಗೆದಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ನೋಡ ನೋಡುತ್ತಿದ್ದಂತೆ ಕಣ್ಣೆದುರಿಗೆ ನಡೆದ ಘಟನೆಯಿಂದ ಸ್ಥಳೀಯರು ಒಂದು ಕ್ಷಣ ಆತಂಕಗೊಂಡರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin