ಶೆಡ್‍ ನಲ್ಲಿ ವಿವಿ ಪ್ಯಾಟ್ ಪತ್ತೆಯಾಗಿರುವುದು ಚುನಾವಣಾ ಅಕ್ರಮಕ್ಕೆ ಸಾಕ್ಷಿ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

BS-Yadiyurappa
ಬೆಂಗಳೂರು, ಮೇ 22- ಶೆಡ್‍ವೊಂದರಲ್ಲಿ ವಿವಿ ಪ್ಯಾಟ್ ಯಂತ್ರದ ಬಾಕ್ಸ್ ಗಳು ಪತ್ತೆಯಾಗಿರವುದು ಚುನಾವಣಾ ಅಕ್ರಮ ನಡೆದಿದೆ ಎನ್ನುವುದಕ್ಕೆ ನಿದರ್ಶನವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ವಿಜಯಪುರ ಜಿಲ್ಲೆಯ ಮನಗುಳಿ ಗ್ರಾಮದ ಶೆಡ್‍ವೊಂದರಲ್ಲಿ ವಿವಿ ಪ್ಯಾಟ್ ಯಂತ್ರದ ಬಾಕ್ಸ್‍ಗಳು ಪತ್ತೆಯಾದ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಚುನಾವಣಾ ಅಕ್ರಮ. ನಿಯಮ ಬಾಹಿರ ಚಟುವಟಿಕೆ ನಡೆದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆದಿಲ್ಲ ಎನ್ನುವ ಅನುಮಾನ ಮೂಡಿಸುವಂತಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಮತದಾನದ ದಿನ ನಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಹಲವೆಡೆ ಹಣ, ಹೆಂಡ ಹಂಚುವುದನ್ನು ಪತ್ತೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಾಕಷ್ಟು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಹಲವು ಕ್ಷೇತ್ರದಲ್ಲಿ ಹಣಬಲ, ತೋಳ್ಬಲ, ಹಣ, ಹೆಂಡ ಹಂಚಿ ಅಧಿಕಾರ ದುರ್ಬಳಕೆ ಮಾಡಿಕೊಂಡರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮËನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೀದರ್, ಕಲಬುರಗಿ ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ಮತದಾರರಿಗೆ ಹಣ, ಹೆಂಡ ಹಂಚಲು ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ನಾಯಕರಿಗೆ ಅಲ್ಲಿನ ಪೊಲೀಸರೇ ಸಹಕಾರ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ವಿವಿ ಪ್ಯಾಟ್ ಯಂತ್ರದ ಬಾಕ್ಸ್ ಪತ್ತೆಯಾಗಿರುವುದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಕೂಡಲೇ ಚುನಾವಣಾ ಆಯೋಗ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ನಡೆದಿರುವ ಚುನಾವಣಾ ಅಕ್ರಮದ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಕ್ರಮಕ್ಕೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಚುನಾವಣಾ ಅಕ್ರಮ ಕಂಡುಬಂದ ಕ್ಷೇತ್ರಗಳಲ್ಲಿ ಹೊಸದಾಗಿ ಚುನಾವಣೆ ನಡೆಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೂ ಕಳುಹಿಸಿದ್ದು, ಚುನಾವಣೋತ್ತರ ಹೋರಾಟ ಆರಂಭಿಸಿರುವ ಸುಳಿವನ್ನು ಹೈಕಮಾಂಡ್‍ಗೆ ಯಡಿಯೂರಪ್ಪ ತಲುಪಿಸಿದ್ದಾರೆ.

Facebook Comments

Sri Raghav

Admin