ಸಂಪುಟ ರಚನೆಯಲ್ಲಾಗಲಿ, ಸರ್ಕಾರದಲ್ಲಾಗಲಿ ನಾನು ಹಸ್ತಕ್ಷೇಪ ಮಾಡಲ್ಲ : ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

HD-Devegowda
ಬೆಂಗಳೂರು, ಮೇ 22-ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಸಂಪುಂಟ ರಚನೆ ಕುರಿತಂತೆ ಕೆಲವು ಪತ್ರಿಕೆಗಳ ಇಂದು ಪ್ರಕಟವಾಗಿರುವ ಸುದ್ದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರಗಳ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆಯಾಗಲಿ, ಮಂತ್ರಿಮಂಡಲದ ರಚನೆ ಬಗ್ಗೆಯಾಗಲಿ, ಸಮನ್ವಯ ಸಮಿತಿ ರಚನೆ ಬಗ್ಗೆಯಾಗಲಿ, ಸರ್ಕಾರದ ಆಡಳಿತ ವಿಚಾರದಲ್ಲಾಗಲೀ ತಾವು ಭಾಗಿಯಾಗುವುದಿಲ್ಲ ಅಥವಾ ಹಸ್ತಕ್ಷೇಪವಿರುವುದಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆ ಕುರಿತಂತೆ ಕೆಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿರುವುದಾಗಿ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ತಮ್ಮ ಹಸ್ತಕ್ಷೇಪವಿರುವುದಿಲ್ಲ ಎಂದು ರಾಜ್ಯದ ಜನತೆಗೆ ತಿಳಿಸುವುದಾಗಿ ಪತ್ರಿಕಾಪ್ರಕಟಣೆಯಲ್ಲಿ ಗೌಡರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಮ್ಮ ವಿರೋಧವಿದೆ ಎಂಬ ಅರ್ಥದಲ್ಲಿ ಪ್ರಕಟವಾಗಿರುವ ಸುದ್ದಿ ಕುಚೋದ್ಯದಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ವಿಚಾರದಲ್ಲಿ ತಮ್ಮ ಪಾತ್ರವಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ.ಯಾವುದೇ ಮಾಧ್ಯಮ ಸುದ್ದಿ ಪ್ರಕಟಣೆಗು ಮುನ್ನ ಅಧಿಕೃತ ಮಾಹಿತಿ ಪಡೆಯಬೇಕು. ಆಧಾರ ರಹಿತ ಸುದ್ದಿ ಪ್ರಕಟಣೆ ಪತ್ರಿಕೋದ್ಯಮಕ್ಕೆ ಮಾರಕವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin