ಹೆಚ್ಡಿಕೆ ಪಟ್ಟಾಭಿಷೇಕದಲ್ಲಿ ಭಾಗವಹಿಸದಂತೆ ಬಿಜೆಪಿ ಮುಖಂಡರಿಗೆ ಹೈಕಮಾಂಡ್ ಕಟ್ಟಪ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01
ಬೆಂಗಳೂರು, ಮೇ 22- ನಾಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಜೆಪಿಯ ಯಾವುದೇ ಶಾಸಕರು ಹಾಗೂ ಮುಖಂಡರು ಭಾಗವಹಿಸಬಾರದು ಎಂದು ಪಕ್ಷದ ಹೈಕಮಾಂಡ್ ಕಟ್ಟಪ್ಪಣೆ ವಿಧಿಸಿದೆ.ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿರುವ ಕುಮಾರಸ್ವಾಮಿ ಪ್ರಮಾಣವಚನಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿರೋಧವನ್ನು ತೋರಿಸಬೇಕೆಂದು ಹೈಕಮಾಂಡ್ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೂಲಕ ಸಂದೇಶ ರವಾನಿಸಿದೆ.

ಹೈಕಮಾಂಡ್‍ನ ಈ ಸಂದೇಶವನ್ನು ಬಿಜೆಪಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು, ಸಂಸದರು, ಕೇಂದ್ರ ಸಚಿವರ ಗಮನಕ್ಕೆ ಬಿಎಸ್‍ವೈ ತಂದಿದ್ದು, ನಾಳೆ ಯಾರೊಬ್ಬರೂ ಬೆಂಗಳೂರಿನಲ್ಲಿಯೇ ಇರಬಾರದು ಎಂದು ಸೂಚಿಸಿದ್ದಾರೆ.ಹೈಕಮಾಂಡ್‍ನ ಆದೇಶ ಮೀರಿ ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಹೋಗಬಾರದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಮಾಡಿಕೊಂಡಿವೆ. ಪ್ರತಿ ಹಂತದಲ್ಲೂ ನಾವು ವಿರೋಧ ವ್ಯಕ್ತಪಡಿಸಿ ಎರಡು ಪಕ್ಷಗಳ ವಿರುದ್ಧ ಹೋರಾಟ ನಡೆಸಬೇಕೆಂದು ಯಡಿಯೂರಪ್ಪ ತಮ್ಮ ಶಾಸಕರಿಗೆ ಕರೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಉತ್ತರ, ದಕ್ಷಿಣ ಎಂಬಂತಿದ್ದ ಎರಡು ಪಕ್ಷಗಳು ಅಧಿಕಾರದ ಲಾಲಾಸೆಗೆ ಬಿದ್ದು ಸರ್ಕಾರ ರಚಿಸಲು ಹೊರಟಿದ್ದಾರೆ. ಇದನ್ನು ಜನರು ಕೂಡ ಕ್ಷಿಮಿಸುವುದಿಲ್ಲ. ಈ ಅವಕಾಶವಾದಿ ರಾಜಕಾರಣವನ್ನು ಜನತೆಯ ಮುಂದಿಡುವಂತೆ ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ಸಂಜೆ 4.3ಕ್ಕೆ ಕುಮಾರಸ್ವಾಮಿ ಅವರು ವಿಧಾನಸೌಧ ಮುಂಭಾಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೇಂದ್ರದ ಎನ್‍ಡಿಎ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನವೆಂದೇ ಹೇಳಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದ ಅನೇಕ ನಾಯಕರು ಆಗಮಿಸಲಿದ್ದಾರೆ.

Facebook Comments

Sri Raghav

Admin