KDLWSನಲ್ಲಿ ಔಷಧಿಗಳ ತೀವ್ರ ಕೊರತೆ, ಬಡ ರೋಗಿಗಳ ನರಳಾಟ

ಈ ಸುದ್ದಿಯನ್ನು ಶೇರ್ ಮಾಡಿ

Medicines--01

ಬೆಂಗಳೂರು, ಮೇ 22-ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಖರೀದಿಸಿ ಪೂರೈಸುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿ(ಕೆಡಿಎಲ್‍ಡಬ್ಲ್ಯುಎಸ್) ಉಗ್ರಾಣಗಳಲ್ಲಿ ಔಷಧಿಗಳ ತೀವ್ರ ಕೊರತೆ ಎದುರಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭಿಸದೇ ಬಡ ರೋಗಿಗಳು ನರಳುವಂತಾಗಿದೆ.

ಕೆಡಿಎಲ್‍ಡಬ್ಲ್ಯುಎಸ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಡಿ ಬರುವ ಆರೋಗ್ಯ ಸಂಸ್ಥೆಗಳಿಗೆ ಉತ್ತಮ ಗುಣಮಟ್ಟದ ಔಷಧಿ, ರಾಸಾಯನಿಕಗಳು ಸಾಧನ-ಸಲಕರಣೆ ಇತ್ಯಾದಿಯನ್ನು ಕಡಿಮೆ ದರದಲ್ಲಿ ಖರೀದಿಸುತ್ತದೆ. ಆಯಾ ಸಂಸ್ಥೆಗಳ ಬೇಡಿಕೆಗಳಿಗೆ ಅನುಗುಣವಾಗಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ಕಾಲದಲ್ಲೂ ಲಭ್ಯವಿರುವಂತೆ ಖರೀದಿಸಿ ವಿತರಿಸುವ ಕಾರ್ಯನಿರ್ವಹಿಸುತ್ತದೆ.

ಆದರೆ ಇಷ್ಟೆಲ್ಲಾ ಉತ್ತಮ ವ್ಯವಸ್ಥೆ ಇದ್ದರೂ ಅಗತ್ಯವಿದ್ದವರಿಗೆ ಔಷಧಿಗಳ ಪೂರೈಕೆಗೆ ಸೊಸೈಟಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಉನ್ನತ ವರ್ಗದವರಿಂದ ಅಡ್ಡಿಯಾಗುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ.  ಕೆಡಿಎಲ್‍ಡಬ್ಲ್ಯುಡಿಎಸ್ ರಾಜ್ಯದಲ್ಲಿ ಒಟ್ಟು 26 ಉಗ್ರಾಣಗಳನ್ನು ಹೊಂದಿದ್ದು, ಅಗತ್ಯವಿರುವ ಬಹು ಮುಖ್ಯ ಔಷಧಗಳು ಕೆಂಪು ಪಟ್ಟಿಗಿಂತಲೂ ಕೆಳಗಿದೆ. ಅಗತ್ಯ ಮತ್ತು ಜೀವರಕ್ಷಕ ಔಷಧಿಗಳ ಅಲಭ್ಯತೆಯಿಂದಾಗಿ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಬಡರೋಗಿಗಳು ನರಳುವಂತಾಗಿದೆ.

ಇದರಲ್ಲಿ ಅವ್ಯವಹಾರಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿವೆ. ವಾರ್ಷಿಕ ಟೆಂಡರ್‍ಗಳ ಮೂಲಕ ಸಂಸ್ಥೆಯ ಔಷಧಿಗಳನ್ನು ಖರೀದಿಸಿ ವಿತರಿಸುತ್ತದೆ. ಆದರೆ ಕ್ಷುಲ್ಲಕ ಕಾರಣಗಳನ್ನು ನೀಡಿ ಟೆಂಡರ್‍ಗಳನ್ನು ಅಂತಿಮಗೊಳಿಸದೇ ಮರು ಟೆಂಡರ್‍ಗೆ ಅವಕಾಶ ಅಥವಾ ಟೆಂಡರ್ ರದ್ದಾಗುವಂತೆ ಮಾಡಲಾಗುತ್ತಿದೆ. ಇದರಲ್ಲಿ ಭಾರೀ ಅಕ್ರಮಗಳು ನಡೆದಿದೆ ಎಂಬ ಆರೋಪಗಳಿವೆ. ಅಲ್ಲದೇ ಕಳೆದ 10 ವರ್ಷಗಳಿಂದ ಸಂಬಂಧಪಟ್ಟವರಿಗೆ ಹಣದ ಮರುಪಾವತಿ ಮಾಡಿಲ್ಲ ಹಾಗೂ ಕಳೆದ ಮೂರು ತಿಂಗಳಿನಿಂದ ಔಷಧಿ ತಯಾರಿಕಾ ಸಂಸ್ಥೆಗಳಿಗೆ ಹಣ ನೀಡಿಲ್ಲ. ಇವುಗಳ ಒಟ್ಟು ಮೌಲ್ಯವೇ 10 ಕೋಟಿ ರೂ.ಗಳು ಎನ್ನಲಾಗಿದೆ.

ಕಳೆದ ವರ್ಷ ಡಿಸೆಂಬರ್‍ನಲ್ಲಿ ಕರೆಯಲಾಗಿದ್ದ ಟೆಂಡರ್‍ಗೆ ಸಂಬಂಧಪಟ್ಟಂತೆ ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ವಿಳಂಬದಿಂದಾಗಿ ಮತ್ತು ಟೆಂಡರ್ ಅಂತಿಮಗೊಳ್ಳದ ಕಾರಣ ಆಸ್ಪತ್ರೆಯಲ್ಲಿ ಔಷಧಿಗಳ ದಾಸ್ತಾನು ಆತಂಕಕಾರಿ ಮಟ್ಟಕ್ಕೆ ಕುಸಿದಿದ್ದು, ರೋಗಿಗಳು ಸಾವು-ಬದುಕಿನೊಂದಿಗೆ ಹೋರಾಡುವಂಥ ಪರಿಸ್ಥಿತಿ ಎದುರಾಗಿದೆ. ಈ ವಿಳಂಬಕ್ಕೆ ಕೆಲವು ಪಟ್ಟಭದ್ರಹಿತಾಸಕ್ತಿಗಳೇ ಕಾರಣ ಎಂದು ಹೇಳಲಾಗಿದೆ. ಆರೋಗ್ಯ ಕೇಂದ್ರಗಳು ಮತ್ತು ಬಡ ರೋಗಿಗಳ ಹಿತಾಸಕ್ತಿಯಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಕಾಲದಲ್ಲಿ ಅಗತ್ಯ ಮತ್ತು ಜೀವರಕ್ಷಕ ಔಷಧಿಗಳನ್ನು ಪೂರೈಸಿ ಬಡ ರೋಗಿಗಳ ಜೀವ ರಕ್ಷಿಸಬೇಕೆಂಬ ಕೂಗು ಕೇಳಿಬಂದಿದೆ.

Facebook Comments

Sri Raghav

Admin