ಉಪಮುಖ್ಯಮಂತ್ರಿ ಹುದ್ದೆಗೇರಿದ ‘ಸಂಯಮ ರಾಜಕಾರಣಿ’ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

– ಕೆ.ಎಸ್. ಜನಾರ್ದನ್

ಕಾಂಗ್ರೆಸ್‍ನ ಪ್ರಾಮಾಣಿಕ ಹಾಗೂ ನಿಷ್ಠಾವಂತ ರಾಜಕಾರಣಿ, ಅತ್ಯಂತ ಸಂಯಮಶೀಲರೂ ಆದ ಡಾ.ಜಿ.ಪರಮೇಶ್ವರ್ ಅವರು ಸತತ ಏಳೂವರೆ ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆದವರು. ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಗ್ರಾಮ ಪಂಚಾಯ್ತಿಯಿಂದ ಹಿಡಿದು ನಗರಸಭೆ, ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ವಿಧಾನಸೌಧ ಮೂರನೇ ಮಹಡಿಯವರೆಗೆ ಪಕ್ಷವನ್ನು ಅಧಿಕಾರದ ಗದ್ದುಗೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಡಾ.ಜಿ.ಪರಮೇಶ್ವರ್.

ಅಧಿಕಾರದ ಹಪಹಪಿಗೆ ಬೀಳಲಿಲ್ಲ, ಪಕ್ಷದ ಹಿತದೃಷ್ಟಿಯಿಂದ ಹಲವು ನೋವುಗಳನ್ನು ನುಂಗಿಕೊಂಡು ಪಕ್ಷವನ್ನು ಮುನ್ನಡೆಸುತ್ತಾ ಸತತ ಏಳೂವರೆ ವರ್ಷಗಳ ಕಾಲ ಕೆಪಿಸಿಸಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಪ್ರಸ್ತುತ ಡಿಸಿಎಂ ಅಧಿಕಾರ ಸ್ವೀಕರಿಸಿದ್ದಾರೆ.1951ರಲ್ಲಿ ತುಮಕೂರಿನ ಸಿದ್ಧಾರ್ಥ ನಗರದ ಗಂಗಲಮ್ಮ-ಚಿಕ್ಕಣ್ಣ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದ ಇವರು ತುಮಕೂರಿನಲ್ಲಿ ಕಾಲೇಜುವರೆಗೆ ಶಿಕ್ಷಣ ಪಡೆದು, ನಂತರ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದು, ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಪಡೆದು ಸ್ವದೇಶಕ್ಕೆ ಹಿಂತಿರುಗಿ ರಾಜೀವ್‍ಗಾಂಧಿಯವರಿಂದ ಆಕರ್ಷಿತರಾಗಿ ರಾಜಕಾರಣಕ್ಕೆ ಪ್ರವೇಶ ಪಡೆದರು.

1989ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಅವರು ಆಯ್ಕೆಯಾದರು. ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದರು. 1999ರಲ್ಲಿ ಮರು ಆಯ್ಕೆಯಾದ ಪರಮೇಶ್ವರ್ ಅವರು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಖಾತೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು.2010 ಆಗಸ್ಟ್ 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ಪರಮೇಶ್ವರ್ ಅವರು, ಅಲ್ಲಿಂದ ಇಲ್ಲಿಯವರೆಗೂ ಈ ಹುದ್ದೆಯನ್ನು ದಕ್ಷತೆಯಿಂದ ನಿರ್ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅಹರ್ನಿಶಿ ಶ್ರಮಿಸಿದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸೋಲನನ್ನುಭವಿಸಿದರು. 2014ರ ಜುಲೈ 1 ರಂದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2015ರ ಅಕ್ಟೋಬರ್‍ನಲ್ಲಿ ಗೃಹ ಸಚಿವರಾಗಿ ನೇಮಕವಾಗಿ ಈ ಎರಡೂ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದರು. ಇದಕ್ಕೂ ಮುನ್ನ ಪರಮೇಶ್ವರ್ ಅವರು 1989ರಿಂದ 1992ರವರೆಗೆ ಕೆಪಿಸಿಸಿ ಜಂಟಿ ಕಾರ್ಯದರ್ಶಿಯಾಗಿ 92 ರಿಂಎ 1997ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿ, 1997 ರಿಂದ 1999ರವರೆಗೆ ಉಪಾಧ್ಯಕ್ಷರಾಗಿ , 2010ರಿಂದ ಇಲ್ಲಿಯವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಅಗ್ರಿಕಲ್ಚರಲ್ ಯೂನಿವರ್ಸಿಟಿ ಸದಸ್ಯರಾಗಿ, ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಬೋರ್ಡ್ ಅಧ್ಯಕ್ಷರಾಗಿ, ಕರ್ನಾಟಕ ಲೈಬ್ರರಿ ಅಥಾರಿಟಿ ಸದಸ್ಯರು, ಕರ್ನಾಟಕ ಮುಕ್ತ ವಿವಿ ಸದಸ್ಯರು, ಆಸ್ಟ್ರೇಲಿಯನ್ ಸೊಸೈಟಿ ಆಫ್ ಪ್ಲಾಂಟ್ ಫಿಜಿಯಾಲಜಿ ಸದಸ್ಯರು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, 2017ರ ಕರ್ನಾಟಕ ಗೇಮ್ ಚೇಂಜರ್ ಅವಾರ್ಡ್ ಸಹ ಪಡೆದಿರುವ ಪರಮೇಶ್ವರ್ ಅವರು, 1993ರಲ್ಲಿ ನ್ಯಾಷನಲ್ ಯೂನಿಟಿ ಅವಾರ್ಡ್ ಪಡೆದಿದ್ದಾರೆ. ಪ್ರಸ್ತುತ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಅವರು ರಾಜಕೀಯದಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೇರಲಿ ಎಂದು ಅವರು ಬೆಂಬಲಿಗರು, ಅಭಿಮಾನಿಗಳ ಒತ್ತಾಸೆಯಾಗಿದೆ.

Facebook Comments

Sri Raghav

Admin