ಮುಖ್ಯಮಂತ್ರಿಯಾದ ನಂತರ ಹೆಚ್ಡಿಕೆ ಮೊದಲ ಸುದ್ದಿಘೋಷ್ಠಿಯಲ್ಲಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

HDK--01

ಬೆಂಗಳೂರು, ಮೇ 23 : ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹೆಚ್. ಡಿ. ಕುಮಾರಸ್ವಾಮಿಯವರು ಸಿಎಂ ಆಗಿ ತಮ್ಮ ಮೊದಲ ಸುದ್ದಿಘೋಷ್ಠಿಯನ್ನು ನಡೆಸಿದರು. ಸಾಲ ಮನ್ನಾ ಮಾಡಬೇಕು ಎಂಬ ವಿಚಾರದಲ್ಲಿ ಹಿಂದಕ್ಕೆ ಸರಿಯಲ್ಲ, ರೈತರ ಸಾಲ ಮನ್ನಾ ವಿಚಾರದಲ್ಲಿ ಕೆಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಿದ್ದೇನೆ. ಅವರ ಲೆಕ್ಕಾಚಾರವೇ ಬೇರೆ, ನಾವು ರಾಜಕೀಯವಾಗಿ ಆಲೋಚಿಸುವುದು ಬೇರೆ ಎಂದರು. ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಟ್ಟು ರೈತರ 53 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಬೇಕು ಎಂಬ ವಿಚಾರದಲ್ಲಿ ಹಿಂದಕ್ಕೆ ಸರಿಯದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ ಈ ವಿಚಾರದಲ್ಲಿ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರೈತ ಚೈತನ್ಯ ಯಾತ್ರೆ, ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ರೈತರು, ಜನಸಾಮಾನ್ಯರ ಸಂಕಷ್ಟಗಳ ಕುರಿತು ಯಡಿಯೂರಪ್ಪ ಸಂಗ್ರಹಿಸಿರುವ ಮಾಹಿತಿಯನ್ನು ನನಗೆ ನೀಡಿದರೆ, ಅವರ ನೋವನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ. ರೈತರ ಸಾಲವನ್ನು ಯಾವ ರೀತಿಯಲ್ಲಿ ಮನ್ನಾ ಮಾಡಬೇಕು ಎಂಬುದರ ಕುರಿತು ಒಂದು ನೀಲಿನಕ್ಷೆ ಸಿದ್ಧಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು. ರೈತರ ಸಾಲ ಮನ್ನಾ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಕುಮಾರಸ್ವಾಮಿ ಯೂಟರ್ನ್ ಎಂದು ಬಿಂಬಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡದಿದ್ದರೆ ರೈತರನ್ನು ದಂಗೆ ಎಬ್ಬಿಸಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದ ಯಾರೊಬ್ಬರೂ ಬೀದಿಗಿಳಿದು ಪ್ರತಿಭಟನೆ ನಡೆಸುವಂತಹ ಅಸ್ತ್ರ ನೀಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿ ಉದ್ಭವಾಗಿದೆ. ಜನಸಾಮಾನ್ಯರಲ್ಲಿ ಈ ರಾಜಕೀಯ ಮೈತ್ರಿ ಕುರಿತು ಪರ-ವಿರೋಧ ಮಾತನಾಡುವವರು ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಈ ಹೊಂದಾಣಿಕೆ ಒಂದು ವರ್ಗದ ಜನರಲ್ಲಿ ಮೂಡಿಸಿರುವ ಅನುಮಾನಗಳು ತಪ್ಪು ಎಂಬುದನ್ನು ನನ್ನ ನಡವಳಿಕೆಗಳ ಮೂಲಕ ಸಾಬೀತುಪಡಿಸುತ್ತೇನೆ ಎಂದು ಅವರು ತಿಳಿಸಿದರು. ಮೈತ್ರಿ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರು ನೈತಿಕತೆ, ಅನೈತಿಕತೆಯ ಮಾತುಗಳನ್ನಾಡಿದ್ದಾರೆ. 2004ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಅತಂತ್ರಗೊಳಿಸಲು ನಾನು ಪ್ರಮುಖ ಪಾತ್ರವಹಿಸಿದ್ದೆ. ಆಗಿನ ಸಂದರ್ಭಗಳು ಬೇರೆ ಇತ್ತು ಎಂದು ಅವರು ಹೇಳಿದರು.

ಈ ಸರಕಾರ ಅತ್ಯಂತ ಸುಭದ್ರ, ಸದೃಢವಾಗಿ ನಡೆಯುತ್ತದೆ. ಯಾವುದೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ನಾಡಿನ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸರಕಾರ ನಡೆಯಲಿದೆ. ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ, ವಿರೋಧ ಪಕ್ಷದಲ್ಲಿ ಕೂರುತ್ತೇನೆ ಎಂದು ಹೇಳಿದ್ದೆ. ಸಾಂದರ್ಭಿಕ ಶಿಶು ನಾನು. ವೈಯಕ್ತಿಕ ಆಸೆ, ತೀರ್ಮಾನಗಳನ್ನು ಬದಿಗಿಡುವ ಅನಿವಾರ್ಯತೆ ನನ್ನ ಮೇಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಿಕರಣ ನೀಡಿದರು.

ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಬೇಕು, ಹಿರಿಯ ನಾಗರಿಕರು, ಶಿಕ್ಷಣ, ವಸತಿ, ವೈದ್ಯಕೀಯ ಕ್ಷೇತ್ರಕ್ಕೆ ನನ್ನದೆ ಆದ ಕಲ್ಪನೆಗಳನ್ನು ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೂ ನಮ್ಮ ಮುಂದಿದೆ. ಹಿಂದಿನ ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ, ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಇದೆ ವೇಳೆ ಬಿಜೆಪಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ ಮೋದಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದ್ದೇವೆ. ಇನ್ನೇನಿದ್ದರೂ ಅಮಿತ್ ಶಾ ಅವರು ಸತ್ತ ಕುದುರೆಯನ್ನು ಮೋದಿ ಬಳಿ ತೆಗೆದುಕೊಂಡು ಹೋಗಬೇಕಷ್ಟೇ’ ಎಂದು ವ್ಯಂಗ್ಯವಾಡಿದರು.

Facebook Comments

Sri Raghav

Admin