ಹೆಚ್ಡಿಕೆಗೆ ಹೆಚ್ಡಿಡಿ ಹೇಳಿದ ಕಿವಿಮಾತೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Devegowda

ಬೆಂಗಳೂರು, ಮೇ 23- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲಹೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬೆಳೆ ಸಾಲ ಮನ್ನಾ ಸೇರಿದಂತೆ ಕೆಲವು ಮಹತ್ವದ ವಿಚಾರಗಳು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ. ಸಮನ್ವಯ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇರುತ್ತಾರೆ. ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಕಿವಿಮಾತು ಹೇಳಿದ್ದೇನೆ ಎಂದರು.
ಜೆಡಿಎಸ್‍ನಲ್ಲಿ 37 ಶಾಸಕರಿದ್ದು, ಹೇಗೆ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತದೆ, ಜೆಡಿಎಸ್‍ಗೆ ನಾಡಿನ ಜನತೆ ಸಂಪೂರ್ಣ ಬಹುಮತ ನೀಡಿಲ್ಲ ಎಂದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಅನ್ನುವುದಕ್ಕಿಂತ ಹೆಚ್ಚಾಗಿ ನಾವು ಎಚ್.ಡಿ.ಕುಮಾರಸ್ವಾಮಿ ಅವರ ತಂದೆಯಾಗಿದ್ದು, ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಆಶೀರ್ವಾದ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಇಂದು ಸಂಜೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಆಗಮಿಸಿದ್ದಾರೆ. ತೃತೀಯ ರಂಗ ರಚನೆಗೆ ಸಂಬಂಧಪಟ್ಟಂತೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೌಡರು ಹೇಳಿದರು.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದ ಹಿನ್ನೆಲೆಯಲ್ಲಿ ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಲಾಯಿತು.

Facebook Comments

Sri Raghav

Admin