ಅಮಿತ್ ಷಾ ಸತ್ತ ಕುದುರೆ ಕೊಡಲಿ ಎಂದ ಸಿಎಂ ಹೆಚ್ಡಿಕೆಗೆ ಯಡಿಯೂರಪ್ಪ ಎದುರೇಟು

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Modi-Shah

ಬೆಂಗಳೂರು, ಮೇ 24- ರಾಜ್ಯದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿರುವ ನೀವು ಪ್ರಧಾನಿ ನರೇಂದ್ರ ಮೋದಿ ಅಶ್ವಮೇಧ ಯಾಗವನ್ನು ಕಟ್ಟಿ ಹಾಕಲು ಸಾಧ್ಯವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರ ಅಶ್ವಮೇಧ ಯಾಗವನ್ನು ಕಟ್ಟಿ ಹಾಕಿದ್ದೇವೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸತ್ತ ಕುದುರೆ ಕೊಡಲಿ ಎಂದು ವ್ಯಂಗ್ಯವಾಡಿದರು. ಇದಕ್ಕೆ ಇಂದು ತಿರುಗೇಟು ನೀಡಿದ ಯಡಿಯೂರಪ್ಪ 140 ಕ್ಷೇತ್ರಗಳಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಗೆದ್ದಿರುವುದು ಕೇವಲ 38 ಕ್ಷೇತ್ರಗಳಲ್ಲಿ ಮಾತ್ರ. ಜನರಿಂದ ತಿರಸ್ಕøತವಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿರುವ ನಿಮಗೆ ಪ್ರಧಾನಿಯವರ ಅಶ್ವಮೇಧವನ್ನು ಕಟ್ಟಿ ಹಾಕಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದರು.
ಅವಕಾಶವಾದಿಗಳ ಕೂಟದಂತಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ. ವಿಶ್ವವೇ ಮೆಚ್ಚುವಂತಹ ಕೆಲಸವನ್ನು ಮೋದಿ ಮಾಡುತ್ತಿರುವಾಗ ಕುಮಾರಸ್ವಾಮಿ ಟೀಕೆಯಿಂದ ನಷ್ಟವಿಲ್ಲ ಎಂದು ಹೇಳಿದರು.

ಜನರಿಂದ ತಿರಸ್ಕøತವಾಗಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಕಾರಣಕ್ಕಾಗಿ ಹಾವು-ಮುಂಗೂಸಿಯಂತಿದ್ದ ನೀವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ. ಎಷ್ಟು ದಿನಗಳವರೆಗೆ ನಿಮ್ಮ ಸರ್ಕಾರ ಇರುತ್ತದೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.  ರಾಷ್ಟ್ರೀಯ ನಾಯಕರನ್ನು ಓಲೈಕೆ ಮಾಡಿಕೊಳ್ಳವ ನಿಮಗೆ ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಲು ಕಾರಣೀಭೂತರಾದ ಸಿದ್ಧರಾಮಯ್ಯನವರನ್ನು ಮಾತನಾಡಿಸುವಷ್ಟು ಸೌಜನ್ಯವೂ ಇಲ್ಲ. ನಿಮಗೆ ಇದು ಶೋಭೆ ತರುತ್ತದೆಯೇ. ಆ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಮಠಾಧೀಶರ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ನೇರವಾಗಿ ರಾಜಕೀಯಕ್ಕೆ ಬನ್ನಿ ಎಂದು ಅವರಿಗೆ ಸವಾಲು ಹಾಕುವುದು ಎಷ್ಟರ ಮಟ್ಟಿಗೆ ಸರಿ. ಮಠಾಧೀಶರು ಧಾರ್ಮಿಕ ಗುರುಗಳು ಕಾಲಕಾಲಕ್ಕೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅಂಥವರ ಬಗ್ಗೆ ಇಷ್ಟು ಹಗರುವಾಗಿ ಮಾತನಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.

Facebook Comments

Sri Raghav

Admin