ಅವಕಾಶವಾದಿ ತೃತೀಯ ರಂಗದಿಂದ ಬಿಜೆಪಿಗೆ ಭಯವಿಲ್ಲ : ಶ್ರೀರಾಮಲು

ಈ ಸುದ್ದಿಯನ್ನು ಶೇರ್ ಮಾಡಿ

Sri Ramulu

ಬಳ್ಳಾರಿ, ಮೇ 24- ಅವಕಾಶವಾದಿ ರಾಜಕಾರಣಕ್ಕೆ ಹೆಸರು ವಾಸಿಯಾಗಿರುವ ತೃತೀಯ ರಂಗದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ರೀತಿಯ ಭಯವಿಲ್ಲ ಎಂದು ಶಾಸಕ ಶ್ರೀರಾಮುಲು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ತೃತೀಯ ರಂಗ ಕಟ್ಟಿಕೊಂಡು ದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿವೆ. ಅವರ ಕನಸು ಕನಸಾಗೇ ಉಳಿಯುತ್ತದೆಯೆ ಹೊರತು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ಟಾಂಗ್ ನೀಡಿದರು.

ತೃತೀಯ ರಂಗದಲ್ಲಿರುವವರು ಬಹುತೇಕ ಸ್ವಾರ್ಥಿಗಳು. ಕಳೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಎದುರಿಸಲಾಗದೆ ಪರಾಭವಗೊಂಡು ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವಕಾಶವಾದಿತನ ಕೂಟದಂತಿರುವ ತೃತೀಯ ರಂಗ ಹುಟ್ಟಿಕೊಂಡ ವೇಗದಲ್ಲೇ ಕಣ್ಮರೆಯಾಗುತ್ತದೆ ಎಂದು ಭವಿಷ್ಯ ನುಡಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ವಿರುದ್ಧ ಒಕ್ಕೂಟ ರಂಗವನ್ನು ರಚಿಸುವುದಾಗಿ ಹೇಳುತ್ತಿದ್ದಾರೆ. ಈಗ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ. ಅವರ ಮಾತು ಮತ್ತು ಕೃತಿಗೂ ಹೊಂದಾಣಿಕೆಯಿಲ್ಲ ಎಂದು ಹೇಳಿದರು.

ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬದ್ಧತೆ ಇಲ್ಲ. ಚುನಾವಣೆಗೂ ಮುನ್ನ ಅವರು ಏನು ಹೇಳಿದ್ದರು? ಈಗ ಏನು ಹೇಳುತ್ತಿದ್ದಾರೆ ಎಂಬುದನ್ನು ನಾಡಿನ ಜನತೆ ಗಮನಿಸುತ್ತಿದ್ದಾರೆ. ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಯಾವ ಕಾರಣಕ್ಕಾಗಿ ಆಶ್ವಾಸನೆ ನೀಡಬೇಕು ಎಂದು ಶ್ರೀರಾಮುಲು ಪ್ರಶ್ನಿಸಿದರು.

Facebook Comments

Sri Raghav

Admin