‘ನಮ್ಮ ಮೈತ್ರಿ ಬಗ್ಗೆ ಯೋಚಿಸೋದು ಬಿಟ್ಟು ನಿಮ್ಮ ಪಕ್ಷ ಸರಿ ಮಾಡ್ಕೊಳಿ’

ಈ ಸುದ್ದಿಯನ್ನು ಶೇರ್ ಮಾಡಿ

Yadiyu

ಬೆಂಗಳೂರು, ಮೇ 24- ಮೈತ್ರಿ ಪಕ್ಷಗಳ ನಡುವೆ ಏನಾಗುತ್ತಿದೆ ಎಂಬುದನ್ನೇ ಟೀಕೆ ಮಾಡುವ ಬದಲು ನಿಮ್ಮ ಪಕ್ಷದಲ್ಲಿರುವ ವೈಪರಿತ್ಯಗಳನ್ನು ಸರಿಪಡಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.  ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿ ಸಾಗಲಿದೆ. ಆ ಬಗ್ಗೆ ಯಡಿಯೂರಪ್ಪ ಅವರಿಗೆ ಚಿಂತೆ ಬೇಡ. ಬಿಜೆಪಿಯ ಒಳಜಗಳವನ್ನು ಮೊದಲು ಸರಿ ಮಾಡಿಕೊಳ್ಳಲಿ ಎಂದರು. ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಕುಮಾರಸ್ವಾಮಿ ಅವರು ತಾವೊಬ್ಬರೇ ಮಾತನಾಡಿದ್ದು, ಉಪಮುಖ್ಯಮಂತ್ರಿಯವರಿಗೆ ಅವಕಾಶ ನೀಡಿಲ್ಲ. ಇದು ಮೈತ್ರಿ ಸರ್ಕಾರದಲ್ಲಿನ ಭಿನ್ನಮತವನ್ನು ತೋರಿಸುತ್ತದೆ ಎಂದು ಯಡಿಯೂರಪ್ಪ ಟೀಕೆ ಮಾಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕುಮಾರಸ್ವಾಮಿ ಅವರು ನಿನ್ನೆ ಯಾವುದೇ ಯೋಜನೆಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ಪ್ರಕಟಿಸಿಲ್ಲ. ಮತ ಹಾಕಿದ ಜನರಿಗೆ ಮತ್ತು ಮೈತ್ರಿ ಕೂಟದ ಮುಖ್ಯಸ್ಥರಿಗೆ ಅಭಿನಂದನೆ ಹೇಳಿದ್ದಾರೆ. ನಾನೂ ಕೂಡ ನನ್ನ ಕಚೇರಿಯಲ್ಲಿ ಪ್ರತ್ಯೇಕವಾಗಿ ಅಭಿನಂದನೆ ಹೇಳುತ್ತೇನೆ. ಅದರಿಂದ ಮೈತ್ರಿ ಕೂಟಕ್ಕೆ ಧಕ್ಕೆಯಾಗುತ್ತದೆ ಎಂಬ ವ್ಯಾಖ್ಯಾನ ಅನಗತ್ಯ ಎಂದರು.

ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ಮುಖಂಡರ ಜತೆ ಚರ್ಚೆ ನಡೆಸಲು ನಿರ್ಧರಿಸುತ್ತೇವೆ ಎಂದು ತಿಳಿಸಿದರು. ನಾಳೆ ನಡೆಯುವ ವಿಶ್ವಾಸಮತಯಾಚನೆಯಲ್ಲಿ ನಮ್ಮ ಮೈತ್ರಿ ಕೂಟ ಜಯಗಳಿಸುವುದು ಶತಸಿದ್ಧ ಎಂದರು. ಈ ಬಾರಿ ಸಂಪುಟದಲ್ಲಿ ಕಳಂಕಿತರಿಗೆ ಅವಕಾಶ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ಕಳಂಕಿತರು ಎಂಬುದು ಕಳೆದ ಅಧಿವೇಶನಕ್ಕೆ ಮುಗಿದ ವಿಷಯ. ಜನ ಅವರನ್ನು ಆಯ್ಕೆ ಮಾಡಿದ ಮೇಲೆ ಕಳಂಕ ಎಂಬ ವಿಷಯ ಅನಗತ್ಯ ಎಂದರು.

Facebook Comments

Sri Raghav

Admin