ನಾಳೆ ಸ್ಪೀಕರ್ ಚುನಾವಣೆ ಬಳಿಕ ಕಲಾಪ ಬಹಿಷ್ಕಾರಕ್ಕೆ ಬಿಜೆಪಿ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Session--01

ಬೆಂಗಳೂರು, ಮೇ 24- ನಾಳೆ ವಿಧಾನಸಭೆಯ ಸ್ಪೀಕರ್ ಚುನಾವಣೆ ಬಳಿಕ ಪ್ರತಿಪಕ್ಷ ಬಿಜೆಪಿ ಕಲಾಪವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿರುವ ಕ್ರಮವನ್ನು ವಿರೋಧಿಸಿ ಬಿಜೆಪಿ ಕಲಾಪವನ್ನು ಬಹಿಷ್ಕರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ನಾಳೆ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ ವತಿಯಿಂದ ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದಿಂದ ಮಾಜಿ ಸಚಿವ, ಹಿರಿಯ ಮುಖಂಡ ರಮೇಶ್ ಕುಮಾರ್ ಕಣಕ್ಕಿಳಿದಿದ್ದಾರೆ. ಈಗಿನ ಬಲಾಬಲದಲ್ಲಿ ಸ್ಪೀಕರ್ ಸ್ಥಾನ ಕಾಂಗ್ರೆಸ್‍ಗೆ ಒಲಿಯುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‍ನಿಂದ 78, ಜೆಡಿಎಸ್ 38 ಹಾಗೂ ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 118 ಶಾಸಕರು ಬೆಂಬಲ ಸಿಗಲಿದೆ. ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 112 ಸದಸ್ಯರ ಬೆಂಬಲ ಸಾಕು.

ಬಿಜೆಪಿ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿರುವುದರಿಂದ ಕೇವಲ ಔಪಚಾರಿಕವಾಗಿ ಸುರೇಶ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ ಎಂದು ತಿಳಿದುಬಂದಿದೆ. ಸ್ಪೀಕರ್ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡುವರು. ಈ ವೇಳೆ ಬಿಜೆಪಿ ಕಲಾಪವನ್ನು ಬಹಿಷ್ಕರಿಸಿ ಸದನದಿಂದ ಹೊರ ನಡೆಯಲಿದೆ.

ಇಂದು ಸಂಜೆ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಆರ್.ಅಶೋಕ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಶಾಸಕಾಂಗ ಸಭೆಯಲ್ಲಿ ನಾಳೆ ಸ್ಪೀಕರ್ ಚುನಾವಣೆಯಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಲಿದೆ.

Facebook Comments

Sri Raghav

Admin