ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಯಡಿಯೂರಪ್ಪಗೆ ಪ್ರತಿಪಕ್ಷ ನಾಯಕನ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು,ಮೇ 24- ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಪ್ರತಿಪಕ್ಷ ನಾಯಕನ ಸ್ಥಾನವನ್ನೂ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮವನ್ನು ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ವರಿಷ್ಠರು ತಾತ್ಕಾಲಿಕವಾಗಿ ಸಡಿಲಿಕೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷಸ್ಥಾನ ಎರಡೂ ಅಧಿಕಾರ ಯಡಿಯೂರಪ್ಪ ಬಳಿಯೇ ಉಳಿಯಲಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸದ್ಯ ಬಿಜೆಪಿ ಶಾಸಕಾಂಗ ನಾಯಕರಾದ ಯಡಿಯೂರಪ್ಪ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಲಿದ್ದಾರೆ. ಹೊಸ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಮರ್ಥ್ಯ ಯಡಿಯೂರಪ್ಪ ಹೊರತುಪಡಿಸಿ ಇತರ ನಾಯಕರಿಗೆ ಇಲ್ಲ ಎನ್ನುವ ಕಾರಣಕ್ಕೆ ಪಕ್ಷ ಈ ನಿರ್ಧಾರಕ್ಕೆ ಬಂದಿದೆ. ಜಗದೀಶ್ ಶೆಟ್ಟರ್ ಕಳೆದ ಅವಧಿಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನು ನಿರೀಕ್ಷಿತ ಮಟ್ಟದಲ್ಲಿ ನಿಭಾಯಿಸಲಿಲ್ಲ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶೆಟ್ಟರ್ ಹೆಸರನ್ನು ಪಕ್ಕಕ್ಕೆ ತಳ್ಳಿದೆ. ಅಶೋಕ್ ಅವರು ಸದ್ಯದ ಮಟ್ಟಿಗೆ ಸದನದಲ್ಲಿ ಸರ್ಕಾರಕ್ಕೆ ಬೆವರಿಳಿಸುವ ಸಾಮರ್ಥ್ಯ ಹೊಂದಿಲ್ಲ. ಅವರಲ್ಲಿ ಮೃದು ಧೋರಣೆ ಹೆಚ್ಚು. ಇನ್ನು ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿವಾದಿತ ಹೇಳಿಕೆಗಳ ಮೂಲಕ ಸ್ವಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ ಎನ್ನುವ ಕಾರಣಕ್ಕೆ ಯಡಿಯೂರಪ್ಪ ಅವರನ್ನೇ ಪ್ರತಿಪಕ್ಷ ನಾಯಕರಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಭವಿಷ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿದರೆ ಆಗ ಬಿಜೆಪಿಗೆ ಮತ್ತೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಆಗ ಯಡಿಯೂರಪ್ಪ ಅವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಲು ಅನುಕೂಲವಾಗಲಿದೆ ಎನ್ನುವುದು ಕಮಲ ಪಾಳಯದ ದೆಹಲಿ ನಾಯಕರ ಲೆಕ್ಕಾಚಾರ ಎನ್ನಲಾಗಿದೆ. ಇನ್ನು ಪ್ರತಿಪಕ್ಷ ನಾಯಕ ಸ್ಥಾನದ ಜೊತೆಗೆ ಮುಂಬರಲಿರುವ ಲೋಕಸಭಾ ಚುನಾವಣೆವರೆಗೂ ಯಡಿಯೂರಪ್ಪ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯ ಪ್ರವಾಸ ಮಾಡುವುದು, ಚುರುಕಿನಿಂದ ಪಕ್ಷ ಸಂಘಟನೆ ಮಾಡುವುದು, ಅಧಿಕಾರ ಕೈ ತಪ್ಪಿದ್ದರೂ ಕಾರ್ಯಕರ್ತರಿಗೆ ಹುರುಪು ತುಂಬುವ ಶಕ್ತಿ ಯಡಿಯೂಪ್ಪಗಿಂತ ಉತ್ತಮವಾಗಿ ನಿಭಾಯಿಸಬಲ್ಲ ಮತ್ತೊಬ್ಬ ನಾಯಕ ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಇಲ್ಲ.

ಅಲ್ಲದೇ ಯಡಿಯೂರಪ್ಪ ಹಿಂದೂ ಬ್ರಾಂಡ್ ಅಲ್ಲದೇ ಜನನಾಯಕ. ಭ್ರಷ್ಟಾಚಾರ ಆರೋಪ ಇದ್ದರೂ ಇತರ ಯಾವುದೇ ವಿವಾದದಲ್ಲಿ ಸಿಲುಕದ ಹೋರಾಟಗಾರ. ಹೀಗಾಗಿ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆ ಬೇರೆ ಮತ ಸೆಳೆಯುವಿಕೆಗೆ ಸಹಕಾರಿಯಾಗಲಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವಂತೆ ಮಾಡಬೇಕು ಎನ್ನುವ ಕಾರಣಕ್ಕೆ ಯಡಿಯೂಪ್ಪ ಅವರಿಗೆ ನಾಯಕತ್ವ ಮಂದುವರೆಸಲು ಕಮಲ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆವರೆಗೂ ಯಡಿಯೂರಪ್ಪ ಎರಡು ಹುದ್ದೆಯಲ್ಲಿ ಮುಂದುವರೆಯಲಿದ್ದು, ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಲಾಗುತ್ತದೆ ಎನ್ನಲಾಗಿದೆ.

Facebook Comments

Sri Raghav

Admin