ಮಕ್ಕಳ ಕಳ್ಳನೆಂದು ಭಾವಿಸಿ ಯುವಕನ ಹತ್ಯೆ ಮಾಡಿದ ಪ್ರಕರಣದಲ್ಲಿ 9 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Child-Kidnapers

ಬೆಂಗಳೂರು, ಮೇ 24- ಮಕ್ಕಳ ಕಳ್ಳನೆಂದು ಶಂಕಿಸಿ ರಾಜಸ್ತಾನ ಮೂಲದ ಕಾಲುರಾಮ್ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಠಾಣೆ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಇನ್ನು ಇಬ್ಬರು ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸ್ಥಳದಲ್ಲಿನ ಸಿಸಿ ಟಿವಿ ಪುಟೇಜ್‍ಗಳನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ.

ಸಿಸಿ ಟಿವಿಯಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಈತನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಇದುವರೆಗೂ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ.

ಘಟನೆ ವಿವರ:
ರಾಜ್ಯದ ಹಲವೆಡೆ ಮಕ್ಕಳ ಕಳ್ಳರು ಆಂಧ್ರಪ್ರದೇಶದಿಂದ ಬಂದಿದ್ದಾರೆಂಬ ಬಗ್ಗೆ ವಾಟ್ಸ್‍ಪ್‍ಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ನಿನ್ನೆ ಮಧ್ಯಾಹ್ನ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ಕಾಟನ್‍ಪೇಟೆ ಪೆನ್ಷನ್ ಮೊಹಲ್ಲಾ ರಂಗನಾಥ್ ಚಿತ್ರಮಂದಿರ ಬಳಿ ಹೋಗುತ್ತಿದ್ದ. ರಾಜಸ್ಥಾನ ಮೂಲದ ಕಾಲುರಾಮ್ ಎಂಬಾತನ ಚಲನವಲನ ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳನೆಂದು ಅನುಮಾನಿಸಿ ಮನಬಂದಂತೆ ಥಳಿಸಿದ್ದಾರೆ.

ಬ್ಯಾಟ್, ಮರದ ದೊಣ್ಣೆ ಹಾಗೂ ಕೈಗಳಿಂದ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿ ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ. ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕರೆಲ್ಲ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಮೃತನ ಜೇಬಿನಲ್ಲಿದ್ದ ಮತದಾರರ ಗುರುತಿನ ಚೀಟಿ ಆಧರಿಸಿದ ಪೊಲೀಸರು ಈತನ ಹೆಸರು ಪತ್ತೆ ಮಾಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

8-Arrested

Facebook Comments

Sri Raghav

Admin