ಮಕ್ಕಳ ಕಳ್ಳರ ವದಂತಿ ಬಗ್ಗೆ ಹುಷಾರ್ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ..!

ಈ ಸುದ್ದಿಯನ್ನು ಶೇರ್ ಮಾಡಿ

Sunil-Kumar--01

ಬೆಂಗಳೂರು, ಮೇ 24- ನೆರೆ ರಾಜ್ಯದ ಕುಖ್ಯಾತ ಮಕ್ಕಳ ಕಳ್ಳರ ಗ್ಯಾಂಗ್ ಕಾಲಿಟ್ಟಿದೆ. ಕ್ಷಣಮಾತ್ರದಲ್ಲಿ ಮಕ್ಕಳನ್ನು ಅಪಹರಿಸಿ ಪರಾರಿಯಾಗುತ್ತಿದ್ದಾರೆಂಬ ವದಂತಿಗಳಿಗೆ ಕಿವಿಗೊಡಬೇಡಿ, ಅಂತಹ ಗ್ಯಾಂಗ್ ನಗರಕ್ಕೆ ಕಾಲಿಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕಲಬುರಗಿ, ಕೋಲಾರ, ತುಮಕೂರು ಮತ್ತಿತರ ಪ್ರದೇಶಗಳಲ್ಲಿ ಮಕ್ಕಳ ಕಳ್ಳರ ಗ್ಯಾಂಗ್ ಕಾರ್ಯಾ
ಚರಣೆ ನಡೆಸುತ್ತಿದೆ ಎಂಬ ವದಂತಿಗಳು ಹರಡಿವೆ.

ಇಂತಹ ವದಂತಿಗಳಿಗೆ ಪೊೀಷಕರು ಕಿವಿಗೊಡಬಾರದು ಎಂದು ಸುನೀಲ್‍ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಮಕ್ಕಳ ಕಳ್ಳರ ಗ್ಯಾಂಗ್ ಭೀತಿಯಿಂದ ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿರುವುದು, ಹತ್ಯೆ ಮಾಡಿರುವುದು ಅಕ್ಷಮ್ಯ ಅಪರಾಧ. ಯಾರೇ ಆಗಲಿ ಇಂತಹ ದುಸ್ಸಾಹಸಕ್ಕೆ ಕೈಹಾಕಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ರಾಜ್ಯಕ್ಕೆ ಯಾವುದೇ ಗ್ಯಾಂಗ್ ಕಾಲಿಟ್ಟಿಲ್ಲ, ಒಂದು ವೇಳೆ ಯಾರ ಮೇಲಾದರೂ ಅನುಮಾನ ಬಂದರೆ ಕೂಡಲೇ ಪೊಲೀಸರಿಗೆ ಹಿಡಿದುಕೊಡಿ ಆದರೆ ಯಾವುದೇ ಕಾರಣಕ್ಕೂ ಹಲ್ಲೆ ನಡೆಸಲು ಮುಂದಾಗಬಾರದು.

ಒಂದು ವೇಳೆ ಕಳ್ಳರ ಗ್ಯಾಂಗ್ ಇಲ್ಲವೇ ಅನಾಮಿಕ ವ್ಯಕ್ತಿಗಳ ಮೇಲೆ ನಿಮಗೆ ಅನುಮಾನ ಬಂದರೆ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ , ಕ್ಷಣಮಾತ್ರದಲ್ಲಿ ಹೊಯ್ಸಳ ಇಲ್ಲವೇ ಇತರೆ ಪೊಲೀಸ್ ವಾಹನಗಳು ಸ್ಥಳಕ್ಕೆ ಭೇಟಿ ನೀಡಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತವೆ ಎಂದು ಸುನೀಲ್‍ಕುಮಾರ್ ಭರವಸೆ ನೀಡಿದರು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರನ್ನು ವಿಚಾರಣೆಗೊಳಪಡಿಸಲು ಪೊಲೀಸ್ ಇಲಾಖೆ ಇದೆ. ವಿನಾಕಾರಣ ಅಮಾಯಕರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡುವಂತಹ ಹೀನ ಕೃತ್ಯಕ್ಕೆ ನಾಗರೀಕ ಸಮಾಜ ಮುಂದಾಗಬಾರದು ಎಂದು ಅವರು ಕಿವಿಮಾತು ಹೇಳಿದರು.

ಹಿನ್ನೆಲೆ: ರಾಜ್ಯಕ್ಕೆ ನೆರೆಯ ಆಂಧ್ರಪ್ರದೇಶದ ಕುಖ್ಯಾತ ಮಕ್ಕಳ ಕಳ್ಳರ ಗ್ಯಾಂಗ್ ಪಾರ್ಥಿ ಟೀಮ್ ಕಾಲಿಟ್ಟಿದೆ ಎಂಬ ಅನುಮಾನ ಎಲ್ಲ ಕಡೆ ಕಾಡುತ್ತಿದೆ.
ಈ ಅನುಮಾನದ ಹಿನ್ನೆಲೆಯಲ್ಲಿ ಪೊೀಷಕರು ತಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಇಡೀ ರಾತ್ರಿ ಜಾಗರಣೆ ನಡೆಸಿರುವ ಉದಾಹರಣೆಗಳೂ ಇವೆ. ಕೆಲವೆಡೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ವರದಿ ಆಗಿವೆ. ಕಳೆದ 19 ರಂದು ಕಲಬುರುಗಿಯಲ್ಲಿ ಮಕ್ಕಳ ಕಳ್ಳರ ಗ್ಯಾಂಗ್ ಬಂದಿದೆ ಎಂಬ ಅನುಮಾನದಿಂದ ಇಲ್ಲಿನ ಸ್ಥಳೀಯ ನಾಗರೀಕರು ರಾಜಸ್ಥಾನ ಮೂಲದ ಅವತಾರ್‍ಸಿಂಗ್ ಎಂಬ ಕ್ರೇನ್ ಆಪರೇಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಅದೇ ರೀತಿ ಕೆಜಿಎಫ್‍ನ ಸೂಸೈಪಾಳ್ಯದಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಭಿಕ್ಷುಕರ ಮೇಲೂ ಹಲ್ಲೆ ನಡೆಸಲಾಗಿತ್ತು. ಆದರೆ ರಾಜ್ಯಕ್ಕೆ ಮಕ್ಕಳ ಕಳ್ಳರ ಗ್ಯಾಂಗ್ ಕಾಲಿಟ್ಟಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆಯದಿದ್ದರೂ ನಿನ್ನೆ ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಜಸ್ಥಾನ ಮೂಲದ ಕಾಲೂರಾಂ ಎಂಬ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಭಾವಿಸಿ ಸ್ಥಳೀಯರು ಬ್ಯಾಟ್ ಮತ್ತಿತರ ವಸ್ತುಗಳಿಂದ ಹಲ್ಲೆ ನಡೆಸಿ ಅಮಾನುಷವಾಗಿ ಹತ್ಯೆ ಮಾಡಿದ್ದರು.

Facebook Comments

Sri Raghav

Admin