ರಾಜೀನಾಮೆ ಪಡೆಯಲ್ಲ ಎಂದು ಡಿಸಿಎಂ ಪರಂಗೆ ಶಾಕ್ ಕೊಟ್ಟ ಸಭಾಪತಿ ಶಂಕರಮೂರ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

param-shankar

ಬೆಂಗಳೂರು,ಮೇ 24- ನೀವು ಸದಸ್ಯರೇ ಅಲ್ಲ. ನೀವು ನೀಡುವ ರಾಜೀನಾಮೆ ನಾನು ತೆಗೆದುಕೊಳ್ಳುವುದೇ ಇಲ್ಲ.. ಹೀಗೆಂದು ಹೇಳಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಕ್ಷಣಕಾಲ ತಬ್ಬಿಬ್ಬುಗೊಳಿಸಿದ ಪ್ರಸಂಗ ನಡೆಯಿತು.  ಈ ಮೊದಲು ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಪರಮೇಶ್ವರ್ ಅವರ ಅವಧಿ 2020ರವರೆಗೆ ಇತ್ತು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇಂದು ವಿಧಾನಪರಿಷತ್‍ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಪರಮೇಶ್ವರ್ ಅವರು ಪರಿಷತ್‍ನ ಸಚೇತಕರಾಗಿರುವ ಐವಾನ್ ಡಿಸೋಜ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್, ಉಪಾಧ್ಯಕ್ಷರಾದ ಎನ್.ಎಸ್.ಬೋಸರಾಜ್ ಅವರೊಂದಿಗೆ ಸಭಾಪತಿ ಶಂಕರಮೂರ್ತಿ ಅವರ ಕೊಠಡಿಗೆ ಹೋಗಿದ್ದರು.
ಸಭಾಪತಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದಾಗ, ನೀವು ಸದಸ್ಯರೇ ಅಲ್ಲ ರಾಜೀನಾಮೆ ನಾನ್ ಹೇಗೆ ತೆಗೆದುಕೊಳ್ಳಲಿ ಎಂದು ಹೇಳಿ ತಬ್ಬಿಬ್ಬು ಮಾಡಿದರು.

ತಕ್ಷಣ ಸ್ಪಷ್ಟನೆ ನೀಡಿದ ಶಂಕರಮೂರ್ತಿ ಅವರು ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ ವಿಧಾನಸಭೆಗೆ ಆಯ್ಕೆಯಾದ ಅಧಿಕೃತ ಅಧಿಸೂಚನೆಯನ್ನು ಚುನಾವಣಾ ಆಯೋಗ ಪ್ರಕಟಿಸುತ್ತಿದ್ದಂತೆ ವಿಧಾನಪರಿಷತ್ ಸದಸ್ಯರ ಸದಸ್ಯತ್ವ ತನ್ನಷ್ಟಕ್ಕೇ ತಾನೇ ಕೊನೆಗೊಳ್ಳುತ್ತದೆ.  ಇದಕ್ಕೆ ರಾಜೀನಾಮೆ ಅಗತ್ಯವಿಲ್ಲ. ಹಾಗಾಗಿ ನೀವು ವಿಧಾನಪರಿಷತ್ ಸದಸ್ಯರೇ ಅಲ್ಲ ಎಂದು ನಿಯಮಾವಳಿಯ ಪುಸ್ತಕವನ್ನು ತೆಗೆದು ತೋರಿಸುವ ಮೂಲಕ ಸಭಾಪತಿ ಅವರು ವಿವರಣೆ ನೀಡಿದರು.
ನಂತರ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಭಾಪತಿ ಅವರು ಅವರೊಂದಿಗೆ ಕೆಲಕಾಲ ಮಹತ್ವದ ಮಾತುಕತೆ ನಡೆಸಿದರು.

ನಂತರ ಹೊರಬಂದ ಪರಮೇಶ್ವರ್ ಅವರು ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಂತೆ ಪರಿಷತ್‍ನ ಸದಸ್ಯತ್ವ ರದ್ದಾಗಿದೆ ಎಂದು ಸಭಾಪತಿ ತಿಳಿಸಿದ್ದಾರೆ. ಹಾಗಾಗಿ ರಾಜೀನಾಮೆ ನೀಡದೆ ವಾಪಸ್ ಹೋಗುತ್ತಿದ್ದೇನೆ ಎಂದು ತಿಳಿಸಿದರು.

Facebook Comments

Sri Raghav

Admin