ರಾಜ್ಯದಲ್ಲಿ ಸಿಡಿಲಿನಾರ್ಭಟಕ್ಕೆ ನಾಲ್ವರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

4-Killed-01
ಹುಬ್ಬಳ್ಳಿ,ಮೇ 24- ಕೊಪ್ಪಳ, ಗದಗ, ರಾಯಚೂರು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಸಿಡಿಲಿಗೆ ನಾಲ್ವರು ಮೃತಪಟ್ಟಿದ್ದಾರೆ. ರಾಯಚೂರಿನ ಸಿಂಧನೂರು ತಾಲ್ಲೂಕಿನ ರಾಮ ಕ್ಯಾಂಪ್ ಬಳಿ ಶರಣಮ್ಮ(37) ಎಂಬ ಮಹಿಳೆ ದನ ಕಾಯುತ್ತಿದ್ದಾಗ ಗಾಳಿ ಸಹಿತ ಮಳೆ ಸುರಿದಿದೆ. ರಕ್ಷಣೆ ಪಡೆಯಲು ಆಕೆ ಮರದ ಬಳಿ ಓಡುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸುಟ್ಟು ಹೋಗಿದ್ದಾರೆ. ಮಳೆ ನಿಂತ ನಂತರ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಇದನ್ನು ನೋಡಿ ದಂಗಾಗಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಪಟ್ಟಣದ ಹೊರವಲಯದಲ್ಲಿರುವ ಹಾತಲಗೇರಿ ಗ್ರಾಮದ ಸಮೀಪ ಕುರಿ ಹಿಂಡು ಕಾಯುತ್ತಿದ್ದ ಮುತ್ತಪ್ಪ(15) ಎಂಬ ಬಾಲಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಕುರಿಗಳು ಸಹ ಸಾವನ್ನಪ್ಪಿವೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆಗಳ ಶೀಟ್‍ಗಳು ಹಾರು ಹೋಗಿವೆ.
ಕೊಪ್ಪಳದಲ್ಲಿ ಅಣ್ಣ -ತಂಗಿ ಹೊಲಕ್ಕೆ ಹೋಗಿ ವಾಪಸ್ಸಾಗುವಾಗ ಸಿಡಿಲು ಬಡಿದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಯಲಬುರ್ಗಿ ತಾಲ್ಲೂಕಿನ ಗುತ್ತೂರಿನ ವಿರೂಪಾಕ್ಷಿ(25) ಹಾಗೂ ಕರಿಯವ್ವ(20) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರು ಹೊಲಕ್ಕೆ ಹೋಗಿ ವಾಪಸ್ಸಾಗುವಾಗ ಬಿರುಗಾಳಿ ಮಳೆ ಸುರಿದಿದೆ. ಈ ವೇಳೆ ಆಶ್ರಯಕ್ಕಾಗಿ ಹತ್ತಿರದಲ್ಲಿದ್ದ ಮರದ ಬಳಿ ಹೋಗುವ ವೇಳೆ ಸಿಡಿಲು ಬಡಿದಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬೇವೂರು ಠಾಣೆ ಪಿಎಸ್ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin