‘ಶ್ರೀಮಂತ ಪಾಟೀಲ್’ಗೆ ಸಚಿವ ಸ್ಥಾನ ನೀಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತೀವಿ’

ಈ ಸುದ್ದಿಯನ್ನು ಶೇರ್ ಮಾಡಿ

Shreemant-Patil--01

ಬೆಂಗಳೂರು, ಮೇ 25- ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತದ ಸಂಕಟ ಆರಂಭವಾಗಿದೆ. ಸಂಪುಟ ರಚನೆ ಸಂದರ್ಭದಲ್ಲಿ ಮರಾಠ ಸಮುದಾಯವನ್ನು ಪ್ರತಿನಿಧಿಸುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಮರಾಠ ಸಮುದಾಯದವರು ಎಚ್ಚರಿಸಿದ್ದಾರೆ.

ಅಂಜಲಿ ನಿಂಬಾಳ್ಕರ್ ಅವರಿಗೆ ಮಂತ್ರಿ ಸ್ಥಾನ ದಕ್ಕದಿರುವ ಹಿನ್ನೆಲೆಯಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷದ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ ಎಂದು ಮರಾಠ ಸಮುದಾಯದ ಮುಖಂಡರು ಕಾಂಗ್ರೆಸ್ ಹೈಕಮಾಂಡ್‍ಗೆ ಎಚ್ಚರಿಕೆಯ ಪತ್ರ ಬರೆದಿದ್ದಾರೆ.  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಲ್ಲರೂ ಜಾತಿವಾರು ಸಮೀಕರಣದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, 60 ಲಕ್ಷದಷ್ಟಿರುವ ಮರಾಠಿಗರ ಪ್ರತಿನಿಧಿಯಾಗಿ ಅಂಜಲಿ ನಿಂಬಾಳ್ಕರ್ ಮತ್ತು ಶ್ರೀಮಂತ ಪಾಟೀಲ್ ಮಾತ್ರ ಗೆಲುವು ಸಾಧಿಸಿರುವುದು. ಹೀಗಾಗಿ ಇಬ್ಬರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು. ಇಲ್ಲದಿದ್ದರೆ ಇದುವರೆಗೂ ಕಾಂಗ್ರೆಸ್ ಬೆಂಬಲಿಸಿಕೊಂಡು ಬರುತ್ತಿರುವ ಮರಾಠಿಗರು ಅನ್ಯ ಪಕ್ಷದತ್ತ ವಾಲಬೇಕಾಗುತ್ತದೆ ಎಂದು ಮರಾಠಿ ಮುಖಂಡರು ಎಚ್ಚರಿಸಿದ್ದಾರೆ.

ಈ ಬಾರಿ ಮರಾಠಿಗರಿಗೆ ಒಂದು ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿ ಈಗಾಗಲೇ ಸಭೆ ನಡೆಸಿರುವ ಮರಾಠಿಗರು ನಮ್ಮ ಬೇಡಿಕೆಯನ್ನು ಬೆದರಿಕೆಯೆಂದಾದರೂ ಪರಿಗಣಿಸಿ, ಇಲ್ಲವೆ ಮನವಿ ಎಂದಾದರೂ ಪರಿಭಾವಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ನಮ್ಮ ದಾರಿ ನಾವು ಹಿಡಿಯಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  ಮರಾಠಿಗರ ಈ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ರಾಜ್ಯದಲ್ಲಿ ಸುಮಾರು 60 ಲಕ್ಷದಷ್ಟು ಮರಾಠಿಗರಿದ್ದಾರೆ. ಅವರ ಪ್ರತಿನಿಧಿಯಾಗಿ ನಾನು ಆರಿಸಿ ಬಂದಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‍ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದ್ದು, ಈ ಸಮಸ್ಯೆಯನ್ನು ವರಿಷ್ಠರು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin