ಸದನದಲ್ಲಿಂದು ಸಾಲಮನ್ನಾ ಘೋಷಣೆಯಾಗದಿದ್ದರೆ ಇಂದಿನಿಂದಲೇ ಹೋರಾಟ : ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01
ಬೆಂಗಳೂರು,ಮೇ 25-ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ಯೋಜನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಘೋಷಣೆ ಮಾಡದಿದ್ದರೆ ಇಂದಿನಿಂದಲೇ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍ಯಡಿಯೂರಪ್ಪ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಬಹುಮತ ಬಂದಿದ್ದರೆ ಸಾಲಮನ್ನಾ ಮಾಡುತ್ತಿದ್ದೆನೆಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಪಲಾಯನವೇ ಹೊರತು ಬೇರೇನೂ ಅಲ್ಲ. ಕೊಟ್ಟ ಮಾತಿನಂತೆ ಸಾಲಮನ್ನಾ ಯೋಜನೆಯನ್ನು ಇಂದೇ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವೆಂದು ಎಚ್ಚರಿಸಿದರು.

ನನ್ನ ಜೊತೆ 103 ಮಂದಿ ಶಾಸಕರು ಇದ್ದಾರೆ. ಅವರೆಲ್ಲರೂ ಸಿಂಹದ ಮರಿಗಳಂತೆ ಕೆಲಸ ಮಾಡಲಿದ್ದಾರೆ. ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಜವಾಬ್ದಾರಿಯುತವಾಗಿ ಕೆಲಸ ಮಾಡಲಿದ್ದೇವೆ. ರಾಜ್ಯದ ಅಭಿವೃದ್ಧಿಯಲ್ಲಿ ಸರ್ಕಾರಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.
ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಸೇರಿಕೊಂಡು ಆ ಪಕ್ಷವನ್ನು ಮುಗಿಸುವುದರಲ್ಲಿ ಯಾವುದೇ ಸಂದೇಹ ಬೇಡ. ಹಿಂದೆ ನಮ್ಮ ಜೊತೆ 20-20 ತಿಂಗಳ ಸರ್ಕಾರ ರಚಿಸಿಕೊಂಡು ಅಧಿಕಾರ ಹಸ್ತಾಂತರಿಸದೆ ನಮಗೆ ಕೈಕೊಟ್ಟರು. ಮುಂದೆ ಕಾಂಗ್ರೆಸಿಗರಿಗೂ ಇದೇ ಗತಿ ಎಂದು ಬಿಎಸ್‍ವೈ ಭವಿಷ್ಯ ನುಡಿದರು.
ನಮ್ಮ ಹೋರಾಟ ಕುಮಾರಸ್ವಾಮಿ ವಿರುದ್ಧವೇ ಹೊರತು. ಕಾಂಗ್ರೆಸ್ ವಿರುದ್ಧವಲ್ಲ. ಜನಾದೇಶಕ್ಕೆ ವಿರುದ್ಧವಾಗಿ ಸರ್ಕಾರ ರಚಿಸಿರುವ ಎರಡೂ ಪಕ್ಷಗಳ ವಿರುದ್ದ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸಲಿದ್ದೇವೆ. ಒಂದೇ ಒಂದು ದಿನವೂ ವ್ಯರ್ಥ ಮಾಡದೆ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲಿದ್ದೇವೆ ಎಂದು ಹೇಳಿದರು.

Facebook Comments

Sri Raghav

Admin