BIG NEWS : ವಿಶ್ವಾಸಗೆದ್ದ ‘ಮೈತ್ರಿ’ : ವಿಧ್ಯುಕ್ತವಾಗಿ ಅಧಿಕಾರಕ್ಕೇರಿದ ಕಾಂಗ್ರೆಸ್-ಜೆಡಿಎಸ್ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Session-Kumaraswamy

ಬೆಂಗಳೂರು,ಮೇ 25- ಸದನದಲ್ಲಿ ಬಿಜೆಪಿ ಸಭಾತ್ಯಾಗದ ನಂತರ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸರ್ಕಾರ ವಿಶ್ವಾಸ ಮತ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ವಿಧ್ಯುಕ್ತವಾಗಿ ಅಧಿಕಾರಕ್ಕೆ ಏರಿತು. 14 ವರ್ಷಗಳ ನಂತರ ಮತ್ತೆ ಆಡಳಿತಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿ ವಿಜಯದ ನಗೆ ಬೀರಿದರು. ಬೆಂಬಲ ನೀಡಿದ ಶಾಸಕರಿಗೆ, ಕಾಂಗ್ರೆಸ್-ಜೆಡಿಎಸ್ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದರು.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮೇ 15ರಿಂದ ಇಂದಿನವರೆಗೆ ಹೋಟೆಲ್ ಮತ್ತು ರೆಸಾರ್ಟ್‍ಗಳಲ್ಲಿ ವಾಸ್ತವ್ಯಹೂಡಿ ಕಾಪಾಡಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರ ಒಗ್ಗಟ್ಟು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಸಫಲತೆಯಲ್ಲಿ ಸಾರ್ಥಕತೆ ಕಂಡಿತು. ಇದಕ್ಕೂ ಮುನ್ನ ಹಲವಾರು ಬೆಳವಣಿಗೆಗಳು ನಡೆದವು. ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರುಗಳು ಬಸ್‍ನಲ್ಲಿ ವಿಧಾನಸೌಧಕ್ಕೆ ಆಗಮಿಸಿದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಎಲ್ಲ ಶಾಸಕರಿಗೂ ಆಯಾ ಪಕ್ಷದ ಅಧ್ಯಕ್ಷರು ವಿಪ್ ಜಾರಿ ಮಾಡಿ ಸದನದಲ್ಲಿ ಸ್ಪೀಕರ್ ಆಯ್ಕೆ ಹಾಗೂ ವಿಶ್ವಾಸ ಮತ ಸಂದರ್ಭದಲ್ಲಿ ಯಾವ ರೀತಿ ಮತ ಚಲಾಯಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು.
ವಿಶ್ವಾಸ ಮತ ಯಾಚನೆಗೂ ಮುನ್ನ ಸ್ಪೀಕರ್ ಆಯ್ಕೆ ಮಾಡಬೇಕಾಗಿದ್ದು , ಅದಕ್ಕಾಗಿ ನಿನ್ನೆಯೇ ಬಿಜೆಪಿ ಪರವಾಗಿ ಸುರೇಶ್‍ಕುಮಾರ್, ಕಾಂಗ್ರೆಸ್-ಜೆಡಿಎಸ್ ಪರವಾಗಿ ರಮೇಶ್‍ಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಹಂಗಾಮಿ ಸ್ಪೀಕರ್ ಕೆ.ಜೆ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲಾಪದಲ್ಲಿ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಯಿತು. ಬಿಜೆಪಿಯಿಂದ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುರೇಶ್‍ಕುಮಾರ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ.ಆರ್.ರಮೇಶ್‍ಕುಮಾರ್ ಅವರನ್ನು ವಿಧಾನಸಭಾ ಸಭಾಧ್ಯಕ್ಷರನ್ನಾಗಿ ನೇಮಿಸಬೇಕೆಂದು ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅನುಮೋದಿಸಿದ ಹೆಸರನ್ನು ಸ್ಪೀಕರ್ ಬೋಪಯ್ಯ ಅವರು ಧ್ವನಿ ಮತದ ಮೂಲಕ ಅಂಗೀಕರಿಸಿ ರಮೇಶ್‍ಕುಮಾರ್ ಅವರು ನೂತನ ಸ್ಪೀಕರ್ ಎಂದು ಘೋಷಿಸಿ ಪೀಠಕ್ಕೆ ಆಹ್ವಾನಿಸಿದರು.

ನೂತನ ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತದ ಪ್ರಸ್ತಾಪ ಮಂಡಿಸಿ ಮಾತನಾಡಿದರು. ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಯಾವುದೇ ಪಕ್ಷಗಳಿಗೆ ಬಹುಮತ ಬಂದಿಲ್ಲ. ಆದರೆ ಬಿಜೆಪಿಯವರು ನಮಗೆ ಹೆಚ್ಚು ಸ್ಥಾನಗಳು ಬಂದಿವೆ ಎಂದು ಹೇಳುತ್ತಾರೆ. ಅದು ಬಹುಮತ ಹೇಗಾಗುತ್ತದೆ. ಬಿಜೆಪಿಯವರು ನಮಗೆ ಬಹುಮತ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಇದುವರೆಗೆ ನಮಗೆ ಅರ್ಥವಾಗಿಲ್ಲ. ಕಳೆದ ವಾರ ವಿಚಿತ್ರ ರಾಜಕೀಯ ಬೆಳವಣಿಗೆಗಳು ನಡೆದಿವೆ. ಕಳೆದ 2004ರಲ್ಲಿ ಇದೇ ರೀತಿ ಅತಂತ್ರ ಫಲಿತಾಂಶ ಬಂದಾಗ ಮೈತ್ರಿ ಸರ್ಕಾರ ರಚನೆಯಾಗಿತ್ತು. ಸದನದ ಕೊನೆಯ ಸೀಟಿನಲ್ಲಿ ಕುಳಿತು ಎಲ್ಲವನ್ನು ಗಮನಿಸುತ್ತಾ ಬಂದಿದ್ದೇನೆ.

ವಿಪಕ್ಷ ನಾಯಕ ಯಡಿಯೂರಪ್ಪನವರು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಫಲಿತಾಂಶ ಪ್ರಕಟವಾದ ಮೇಲೆ ಕಾಂಗ್ರೆಸ್ 78, ಬಿಎಸ್‍ಪಿ ಒಳಗೊಂಡಂತೆ ಜೆಡಿಎಸ್‍ನ 38 ಸದಸ್ಯರು ಮೈತ್ರಿ ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಅತಿ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದ ರಾಜ್ಯಪಾಲರು ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ಮಾಡಿಕೊಟ್ಟಿದ್ದು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿತ್ತು.

ರಾಜ್ಯದಲ್ಲಿ ಮೈತ್ರಿ ಆಡಳಿತದ ಅನಿವಾರ್ಯತೆ, ಭವಿಷ್ಯದ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಸದನದಲ್ಲಿ ವಿವರಗಳನ್ನು ನೀಡಿ ಕೋರಿದ ವಿಶ್ವಾಸಮತಕ್ಕೆ ಅಂಗೀಕಾರ ದೊರೆಯಿತು. ವಿಶ್ವಾಸಮತ ದೊರೆಯುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.

Facebook Comments

Sri Raghav

Admin