BREAKING : ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar-01

ಬೆಂಗಳೂರು, ಮೇ 25- ವಿಧಾನಸಭಾಧ್ಯಕ್ಷ ಸ್ಥಾನದ ಚುನಾವಣೆಯಿಂದ ಬಿಜೆಪಿ ಹಿಂದೆ ಸರಿದಿದ್ದರಿಂದ ಕಾಂಗ್ರೆಸ್‍ನ ಕೆ.ಆರ್.ರಮೇಶ್‍ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭಾಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ನಿನ್ನೆ ಎರಡು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಬಿಜೆಪಿಯಿಂದ ಸುರೇಶ್‍ಕುಮಾರ್ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ರಮೇಶ್‍ಕುಮಾರ್ ಅವರು ನಾಮಪತ್ರ ರೂಪದ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಇಂದು ವಿಧಾನಸಭೆಯ ಕಲಾಪದಲ್ಲಿ ಬಿಜೆಪಿಯ ಸುರೇಶ್‍ಕುಮಾರ್ ಅವರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಮಂಡಿಸದೇ ಸ್ಪರ್ಧೆಯಿಂದ ಹಿಂದೆ ಸರಿಯಿತು. ಕಾಂಗ್ರೆಸ್‍ನ ರಮೇಶ್‍ಕುಮಾರ್ ಅವರ ಪ್ರಸ್ತಾವನೆ ಮಂಡನೆಯಾಗಿ ಸದನ ಧ್ವನಿಮತದ ಅಂಗೀಕಾರ ಪಡೆಯಿತು. ಈ ಮೂಲಕ ರಮೇಶ್‍ಕುಮಾರ್ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಇಬ್ಬರು ಪಕ್ಷೇತರರನ್ನು ಒಳಗೊಂಡಂತೆ ಒಟ್ಟು 117 ಮಂದಿ ಶಾಸಕರ ಸಂಖ್ಯಾಬಲವನ್ನು ಹೊಂದಿದೆ. ಬಿಜೆಪಿ 104 ಸಂಖ್ಯಾ ಬಲವನ್ನು ಹೊಂದಿದೆ. ಚುನಾವಣೆ ನಡೆದಿದ್ದರೆ ಬಿಜೆಪಿ ಅಭ್ಯರ್ಥಿ ಗೆಲುವು ಕಷ್ಟ ಎಂದು ಅರ್ಥೈಸಿಕೊಂಡ ವರಿಷ್ಠರು ಸುರೇಶ್‍ಕುಮಾರ್ ಸ್ಪೀಕರ್ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ನಿರ್ಧಾರ ಕೈಗೊಂಡರು.  ಬಹುತೇಕ ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯುವುದೇ ರೂಡಿಯಾಗಿದೆ. ಸ್ಪೀಕರ್ ಸ್ಥಾನ ಪಕ್ಷಾತೀತವಾಗಿದ್ದು, ಎಲ್ಲಾ ಪಕ್ಷಗಳಿಗೂ ಸಮಾನ ನ್ಯಾಯ ಕೊಡುವಂತಹ ಜವಾಬ್ದಾರಿ ಹೊಂದಿದೆ. ಹೀಗಾಗಿ ಸ್ಪೀಕರ್ ಆಯ್ಕೆಗೆ ಬಹುಮತ ಇರುವ ಪಕ್ಷಗಳಿಗೆ ಸಾಧ್ಯವಾಗಲಿದ್ದು, ಪ್ರತಿಪಕ್ಷಗಳು ಸ್ಪರ್ಧೆಯಿಂದ ಹಿಂದೆ ಸರಿಯುತ್ತವೆ.

ರಮೇಶ್ ಕುಮಾರ್ ಅವರ ಆಯ್ಕೆಯಲ್ಲೂ ಅದೇ ರೀತಿಯ ಸತ್‍ಸಂಪ್ರದಾಯ ಮುಂದುವರೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಕ್ಷೇತ್ರದಿಂದ 6ನೇ ಅವಧಿಗೆ ಶಾಸಕರಾಗಿರುವ ರಮೇಶ್‍ಕುಮಾರ್ ವಿಧಾನಸಭಾಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಖಾಯಂ ವಿಧಾನಸಭೆ ಅಧ್ಯಕ್ಷರಾಗಿ ಒಬ್ಬ ವ್ಯಕ್ತಿ ಎರಡು ಅವಧಿಗೆ ಕೆಲಸ ಮಾಡಿರುವ ಉದಾಹರಣೆಗಳು ಇಲ್ಲ. ರಮೇಶ್‍ಕುಮಾರ್ ಆ ಕೀರ್ತಿಗೆ ಪಾತ್ರರಾಗಿದ್ದಾರೆ.

Facebook Comments

Sri Raghav

Admin