ಆಡಳಿತಕ್ಕ ಮೇಜರ್ ಸರ್ಜರಿ ಮಾಡಲು ಮುಂದಾದ ಸಿಎಂ : ಐಎಎಸ್-ಐಪಿಎಸ್ ಗಳ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Film

ಬೆಂಗಳೂರು, ಮೇ 26- ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಹೇಳಲಾಗಿದ್ದ ವಿಶ್ವಾಸ ಮತ ಗೆದ್ದು ಹುಮ್ಮಸ್ಸಿನಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತಕ್ಕೆ ಮೇಜರ್ ಸರ್ಜರಿ ನಡೆಸಲು ಮುಂದಾಗಿದ್ದಾರೆ. ಕಳೆದ ಹಲವು ದಿನಗಳಿಂದ ಆಯಾಕಟ್ಟಿನ ಜಾಗದಲ್ಲಿ ಠಿಕಾಣಿ ಹೂಡಿರುವ ಐಎಎಸ್, ಐಪಿಎಸ್, ಐಎಫ್‍ಎಸ್ ಸೇರಿದಂತೆ ಅಧಿಕಾರಿಗಳನ್ನು ಯಾವುದೇ ಸಂದರ್ಭದಲ್ಲೂ ಎತ್ತಂಗಡಿ ಮಾಡಲಿದ್ದಾರೆ.

ಒಂದೆರಡು ದಿನಗಳಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಜೊತೆ ಚರ್ಚಿಸಿ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದೀಚೆಗೆ ಪ್ರಮುಖ ಹುದ್ದೆಗಳಲ್ಲಿರುವ ಹಾಗೂ ಬೇರೆ ಬೇರೆ ಪಕ್ಷಗಳ ಜೊತೆ ಬಾಂಧವ್ಯ ಇಟ್ಟುಕೊಂಡಿರುವವರ ಪಟ್ಟಿ ಸಿದ್ಧವಾಗಿದ್ದು , ಇಂಥವರನ್ನು ಸದ್ಯದಲ್ಲೇ ವರ್ಗಾವಣೆ ಮಾಡಲಿದ್ದಾರೆ.

ಪ್ರಮುಖ ಇಲಾಖೆಗಳಾದ ಗೃಹ,ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಇಂಧನ, ಹಣಕಾಸು, ಕಂದಾಯ ಸೇರಿದಂತೆ ಮತ್ತಿತರ ಪ್ರಮುಖ ಇಲಾಖೆಗಳ ಅಧಿಕಾರಿಗಳು ಬೇರೊಂದು ಸ್ಥಳಕ್ಕೆ ಎತ್ತಂಗಡಿಯಾಗುವುದು ಬಹುತೇಕ ಖಚಿತವಾಗಿದೆ. ಹೊಸ ಸರ್ಕಾರ ಬಂದ ಮೇಲೆ ಸಾಮಾನ್ಯವಾಗಿ ಅಧಿಕಾರಿಗಳನ್ನು ವರ್ಗಾಯಿಸುವುದು ಸರ್ವ ಸಾಮಾನ್ಯ. ಕೆಲ ದಿನಗಳ ಹಿಂದೆ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನದಂದೇ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಮುಳ್ಳಿನ ತಂತಿಯ ಮೇಲೆ ನಡೆಯಬೇಕಾದ ಅನಿವಾರ್ಯತೆ ಇದೆ. ಸರ್ಕಾರಕ್ಕೆ ಹೆಚ್ಚಿನ ಬಹುಮತವಿಲ್ಲ. ಒಂದು ಸರ್ಕಾರ ಯಶಸ್ವಿಯಾಗಬೇಕಾದರೆ ಅದರಲ್ಲಿ ಅಧಿಕಾರಿಗಳ ಪಾತ್ರವೂ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಡಳಿತ ವರ್ಗಕ್ಕೆ ವೇಗ ನೀಡಲು ಮುಂದಾಗಿರುವ ಕಾರಣ ಅಧಿಕಾರಿಗಳ ವರ್ಗಾವಣೆ ಅನಿವಾರ್ಯವಾಗಿದೆ.

ಪೊಲೀಸ್ ಇಲಾಖೆಗೆ ಸರ್ಜರಿ:
ಮೂಲಗಳ ಪ್ರಕಾರ ಹೊಸ ಸರ್ಕಾರ ಪೊಲೀಸ್ ಇಲಾಖೆಗೆ ಸರ್ಜರಿ ನಡೆಸಲು ತೀರ್ಮಾನಿಸಿದೆ. ಮುಖ್ಯವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ, ಲೋಕಾಯುಕ್ತ ,ಕಾನೂನು ಮತ್ತು ಸುವ್ಯವಸ್ಥೆ,ವಲಯ ಐಜಿಪಿಗಳು, ಕೆಎಸ್‍ಆರ್‍ಪಿ ಸೇರಿದಂತೆ ಇಡೀ ಪೊಲೀಸ್ ಇಲಾಖೆಯಲ್ಲೂ ಭಾರೀ ಬದಲಾವಣೆಯಾಗುವ ನಿರೀಕ್ಷೆಯಿದೆ. ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ವಿಭಾಗೀಯ ಡಿಸಿಪಿಗಳು, ಎಸಿಪಿ, ಇನ್‍ಸ್ಪೆಕ್ಟರ್‍ಗಳು ಸೇರಿದಂತೆ ಮತ್ತಿತರರು ಸದ್ಯದಲ್ಲೇ ವರ್ಗಾವಣೆಗೊಳ್ಳಲಿದ್ದಾರೆ.

ಸದ್ಯ ಗೃಹ ಇಲಾಖೆಯ ಉನ್ನತ ಮೂಲಗಳು ಮಾಹಿತಿಯ ಪ್ರಕಾರ ಗುಪ್ತಚರ ಇಲಾಖೆಯ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಜÁಗಕ್ಕೆ ಒಕ್ಕಲಿಗ ಅಧಿಕಾರಿ ಕಿಶೋರ್ ಚಂದ್ರರನ್ನು ನೇಮಿಸುವ ಇಚ್ಚೆ ಕುಮಾರಸ್ವಾಮಿ ಹೊಂದಿದ್ದಾರೆ. ಈ ಹಿಂದೆ 2006ರಲ್ಲಿ ಮುಖ್ಯಮಂತ್ರಿಯಾದಾಗಲೂ ಕಿಶೋರ್ ಚಂದ್ರರನ್ನು ಕುಮಾರಸ್ವಾಮಿ ಗುಪ್ತಚರ ಇಲಾಖೆಯ ಡಿಜಿಪಿ ಹುದ್ದೆಗೆ ನೇಮಕ ಮಾಡಿದ್ದರು. ಸರ್ಕಾರದ ಸುತ್ತ ನಡೆಯುತ್ತಿರುವ ಆಗುಹೋಗುಗಳನ್ನು ತಿಳಿದುಕೊಳ್ಳಲು ಗುಪ್ತಚರ ಇಲಾಖೆಯ ಬಹುಮುಖ್ಯ ಇಲಾಖೆಯಾಗಿದೆ.

ವಿರೋಧ ಪಕ್ಷದ ಚಟುವಟಿಕೆ, ಪಕ್ದದೊಳಗೆ ನಡೆಯುತ್ತಿರುವ ಪಕ್ಷ ವಿರೋಧಿ ಚಟುವಟಿಕೆ ಮತ್ತಿತರ ಅಂಶಗಳ ಬಗ್ಗೆ ಗುಪ್ತಚರ ಇಲಾಖೆಯ ಮೂಲಕ ಸದಾ ಕಣ್ಣಿಡಲು ಗುಪ್ತಚರ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತದೆ. ಜತೆಗೆ ಇಡೀ ರಾಜ್ಯದಲ್ಲಿ ನಡೆಯುವ ವರ್ತಮಾನಗಳನ್ನೂ ಗುಪ್ತಚರ ಇಲಾಖೆಯ ಡಿಜಿಪಿಯೇ ಪ್ರತಿನಿತ್ಯ ಮುಖ್ಯಮಂತ್ರಿಗಳಿಗೆ ತಿಳಿಸುತ್ತಾರೆ. ಡಿಜಿ ಮತ್ತು ಐಜಿಪಿ ಹುದ್ದೆಯ ನಂತರದ ಪ್ರಮುಖ ಹುದ್ದೆ ಇದಾಗಿದೆ. ಗುಪ್ತಚರ ಇಲಾಖೆಯ ಅಧಿಕಾರಿಗಳ ಬದಲಾವಣೆಯ ಜತೆಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಹೆಚ್ಚುವರಿ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಕೂಡ ವರ್ಗಾವಣೆ ಮಾಡುವ ಸಾಧ್ಯತೆಯಿದೆ.

Facebook Comments

Sri Raghav

Admin