ಬೆಂಗಳೂರಲ್ಲಿ ಮಿತಿಮೀರಿದ ಮೊಬೈಲ್ ಕಳ್ಳರ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

Mobile--01

ಬೆಂಗಳೂರು, ಮೇ 27-ಸರಗಳ್ಳರ ಹಾವಳಿ ಮಿತಿಮೀರಿದ್ದ ನಗರದಲ್ಲಿ ಇದೀಗ ಮೊಬೈಲ್ ಕಳ್ಳರ ಕಾಟ ಹೆಚ್ಚಾಗಿದೆ. ನಿನ್ನೆ ರಾತ್ರಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಕಡೆ ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಕಾಮಾಕ್ಷಿಪಾಳ್ಯ:
ನಿನ್ನೆ ರಾತ್ರಿ 8.45ರ ಸಮಯದಲ್ಲಿ ವರುಣ್ ಎಂಬಾತ ಸುಮನಹಳ್ಳಿ ವೃತ್ತದಲ್ಲಿ ಕ್ಯಾಬ್‍ಗೆ ಕಾಯುತ್ತಿದ್ದಾಗ ಮೋಟಾರ್‍ಬೈಕ್‍ನಲ್ಲಿ ಬಂದ ಇಬ್ಬರು ಕಳ್ಳರು ಆತನನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತಂತೆ ವರುಣ್ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯನಗರ:
ನಿನ್ನೆ ರಾತ್ರಿ ಸುಮಾರು 8.50ರ ಸುಮಾರಿಗೆ ವಿಜಯನಗರದ ವಾಟರ್‍ಟ್ಯಾಂಕ್ ಸಮೀಪ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಬಸವರಾಜ್ ಎಂಬುವವರ ಮೊಬೈಲ್‍ಅನ್ನು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವೇಶ್ವರನಗರ:
ಅದೇ ರೀತಿ ಬಸವೇಶ್ವರನಗರದ ನೇತಾಜಿ ರಸ್ತೆಯಲ್ಲಿ ರಾತ್ರಿ 8.15ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ನವನೀತ್ ಎಂಬುವವರ ಮೊಬೈಲ್‍ಅನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದು, ಬಸವೇಶ್ವರನಗರ ಠಾಣೆಗೆ ದೂರು ನೀಡಲಾಗಿದೆ. ರಾತ್ರಿ 8.15 ರಿಂದ 8.45ರ ವೇಳೆಗೆ ಮೂರೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮೊಬೈಲ್ ಅಪಹರಣ ಪ್ರಕರಣ ನಡೆದಿರುವುದರಿಂದ ಒಂದೇ ತಂಡದ ಸದಸ್ಯರು ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮೊಬೈಲ್ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.

Facebook Comments

Sri Raghav

Admin