ಭಾರೀ ಮಳೆಗೆ ತತ್ತರಿಸಿದ 35ಕ್ಕೂ ಹೆಚ್ಚು ಸುಡುಗಾಡು ಸಿದ್ದರ ಕುಟುಂಬಗಳು

ಈ ಸುದ್ದಿಯನ್ನು ಶೇರ್ ಮಾಡಿ

Sudugadu
ಚಿಕ್ಕನಾಯಕನಹಳ್ಳಿ, ಮೇ 27- ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪಟ್ಟಣದ ಕೇದಿಗೆಹಳ್ಳಿ ಗುಂಡುತೋಪಿನ ಮೂವತ್ತೈದಕ್ಕೂ ಹೆಚ್ಚು ಕುಟುಂಬಗಳು ತತ್ತರಿಸಿ ಹೋಗಿದ್ದು, ಗುಡಿಸಲುಗಳು ಬಿರುಗಾಳಿಗೆ ಹಾರಿ ಹೋಗಿವೆ, ರಕ್ಷಣೆ ಇಲ್ಲದೆ ಸುಡುಗಾಡು ಸಿದ್ದರು ಪರದಾಡುತ್ತಿದ್ದಾರೆ.
ಪಟ್ಟಣದಲ್ಲಿ ಸುರಿದ ಗಾಳಿ ಮಳೆಗೆ ಲಕ್ಷ್ಮಿದೇವಿ ಹಾಗೂ ಶಿವಮ್ಮ ಎಂಬವರ ಗುಡಿಸಲು ಸಂಪೂರ್ಣವಾಗಿ ಹಾರಿ ಹೋಗಿದ್ದು, ಗುಡಿಸಲುಗಳ ಮೇಲೆ ಮರವೊಂದು ಮುರಿದು ಬಿದ್ದಿದೆ. ಗುಡಿಸಲಿನಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಪಕ್ಕದಲ್ಲೇ ಇರುವ ದೊಡ್ಡ ಹುಣಸೆಮರ ಬಿದ್ದು ಬಲಿ ತೆಗೆದುಕೊಳ್ಳುವ ಆತಂಕ ಅಲೆಮಾರಿ ಸುಡುಗಾಡು ಸಿದ್ದರನ್ನು ಕಾಡುತ್ತಿದೆ.

ಕಳೆದ 35 ವರ್ಷಗಳಿಂದ ಪಟ್ಟಣದ 6ನೇ ವಾರ್ಡ್‍ನ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಸುಡುಗಾಡು ಸಿದ್ದರ 25 ಕುಟುಂಬಗಳು ನೆಲೆ ನಿಂತಿವೆ. ವಸತಿ ಹಾಗೂ ಸೂರಿಗಾಗಿ ದಶಕಗಳಿಂದ ಹೋರಾಡುತ್ತಾ ಬರುತ್ತಿದ್ದೇವೆ. ಆದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗುಂಡುತೋಪಿನ ಸುಡುಗಾಡು ಸಿದ್ದರು ಆರೋಪಿಸಿದ್ದಾರೆ.

ನೊಂದ ಮಹಿಳೆ ಗೌರಮ್ಮ ಮಾತನಾಡಿ, ನಾವು ಹಳ್ಳಿ ಸುತ್ತಿ ಕೂದಲು ಏರ್‍ಪಿನ್, ಬಾಚಣಿಕೆ ವ್ಯಾಪಾರ ಮಾಡಿ ಬದುಕ ಬೇಕು. ಮಳೆಗೆ ಗುಡಿಸಲುಗಳು ಹಾರಿ ಹೋಗಿವೆ. ಹಾವು, ಚೇಳಿನಂಥ ವಿಷಜಂತುಗಳು ಮಳೆಯ ನೀರಿನೊಂದಿಗೆ ಮನೆಗೆ ನುಗ್ಗುತ್ತಿವೆ. ರಾತ್ರಿಯೆಲ್ಲಾ ಜಾಗರಣೆ ಮಾಡುತ್ತೇವೆ, ಪ್ರತಿ ನಿತ್ಯ ಗುಡಿಸಲುಗಳನ್ನು ರಿಪೇರಿ ಮಾಡುವುದೇ ಕೆಲಸವಾಗಿದೆ. ಕಳೆದ ಒಂದು ವಾರದಿಂದ ಯಾರೂ ವ್ಯಾಪಾರಕ್ಕೆ ಹೋಗಿಲ್ಲ ಎಂದು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಇದೇ ರೀತಿ ಹಲವರು ತಮ್ಮ ತಮ್ಮ ನೋವುಗಳನ್ನು ಬಿಚ್ಚಿಟ್ಟಿದ್ದಾರೆ.

ಅಖಿಲ ಕರ್ನಾಟಕ ಸುಡುಗಾಡು ಸಿದ್ದರ ಮಹಾ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶಯ್ಯ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿ ಮೋಹನ್ ರಾಜ್ ಪಟ್ಟಣದ ಹೊರ ವಲಯ ದಬ್ಬೇಘಟ್ಟದ ಸರ್ವೆ ನಂ.122ರಲ್ಲಿ 2.5 ಎಕರೆ ಜಮೀನನ್ನು ಸುಡುಗಾಡು ಸಿದ್ಧರ ಪುನರ್ ವಸತಿಗಾಗಿ ಗುರುತಿಸಿ ಆದೇಶ ಹೊರಡಿಸಿದ್ದಾರೆ. ಆದಷ್ಟು ಬೇಗ ನಿವೇಶನ ಒದಗಿಸಿಕೊಟ್ಟು ಸುಡುಗಾಡು ಸಿದ್ಧರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಲಿ ಎಂದರು.ಸುಡುಗಾಡ ಸಿದ್ದರಿಗೆ ನಿವೇಶನ ನೀಡಲು ಡಿಸಿ ಕಚೇರಿಯಿಂದ ನಿರ್ದೇಶನ ಬಂದಿದೆ, ಈ ಸಂಬಂಧ ಅರ್ಜಿಗಳನ್ನು ತರಿಸಿಕೊಳ್ಳಲಾಗಿದೆ. ಶೀಘ್ರ ದಾಖಲೆ ಸಿದ್ದಪಡಿಸಿ ಇವರ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳತ್ತೇನೆ ಎನ್ನುತ್ತಾರೆ ತಹಸೀಲ್ದಾರ್ ತಿಮ್ಮಪ್ಪ.

ಚಿಕ್ಕನಾಯಕನಹಳ್ಳಿಯ ಅಲೆಮಾರಿ ಪಂಗಡವಾದ ಸುಡುಗಾಡು ಸಿದ್ದರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗ ನೂತನ ಜಿಲ್ಲಾಧಿಕಾರಿಗಳು ಬಂದಿದ್ದು, ಸುಡುಗಾಡು ಸಿದ್ಧರಿಗೆ ಶೀಘ್ರ ನಿವೇಶನ ಒದಗಿಸಿದರೆ ಅಲೆಮಾರಿ ಕೋಶದ ವತಿಯಿಂದ ಮನೆ ನಿರ್ಮಿಸಿಕೊಡಲು ಸಿದ್ದರಿದ್ದೇವೆ ಎಂದು ನೋಡಲ್ ಅಧಿಕಾರಿ ಡಾ.ಬಾಲಗುರುಮೂರ್ತಿ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin