4 ವರ್ಷಗಳಲ್ಲಿ 10 ಕೋಟಿ ಎಲ್‍ಪಿಜಿ ಸಂಪರ್ಕ ಕಲ್ಪಿಸಿದ್ದೇವೆ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01
ನವದೆಹಲಿ,ಮೇ 28-ತಮ್ಮ ಸರ್ಕಾರವು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಡ ಮಹಿಳೆಯರಿಗೆ ನಾಲ್ಕು ಕೋಟಿ ಸೇರಿದಂತೆ 10 ಕೋಟಿ ಎಲ್‍ಪಿಜಿ ಸೌಲಭ್ಯವನ್ನು ಕಲ್ಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದ ಕೆಲವು ಮಹಿಳಾ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಮೋದಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಆರು ದಶಕಗಳಲ್ಲಿ 13 ಕೋಟಿ ಎಲ್‍ಪಿಜಿ ಸಂಪರ್ಕ ಪೂರೈಸಿದ್ದರೆ ಈಗಿನ ಕೇಂದ್ರ ಸರ್ಕಾರ ಕೇವಲ ನಾಲ್ಕು ವರ್ಷಗಳಲ್ಲೇ 10 ಕೋಟಿ ಅಡುಗೆ ಅನಿಲ ಸೌಲಭ್ಯವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.2014ರವರೆಗೆ ಕೇವಲ 13 ಕೋಟಿ ಎಲ್‍ಪಿಜಿ ಸಂಪರ್ಕಗಳನ್ನು ಕಲ್ಪಿಸಲಾಗಿತ್ತು. ಇದು ಶ್ರೀಮಂತರು ಮತ್ತು ಉಳ್ಳವರ ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ನಮ್ಮ ಸರ್ಕಾರವು ಪೂರೈಸಿರುವ ಎಲ್‍ಪಿಜಿ ಸಂಪರ್ಕಗಳು ಬಹುತೇಕ ಬಡವರಿಗೆ ಲಭಿಸಿದೆ.ಅದರಲ್ಲೂ ನಾಲ್ಕು ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸೌಕರ್ಯ ನೀಡಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯು ಬಡವರ, ದಲಿತರ, ಬುಡಕಟ್ಟು ಸಮುದಾಯದವರ ಬದುಕನ್ನು ಸದೃಢಗೊಳಿಸಿದೆ. ಸಾಮಾಜಿಕ ಸಬಲೀಕರಣದಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಮೋದಿ ಬಣ್ಣಿಸಿದರು. ಈ ಯೋಜನೆಯನ್ನು 2016ರ ಮೇ ತಿಂಗಳಿನಲ್ಲಿ ಆರಂಭಿಸಲಾಗಿತ್ತು. ಮುಂದಿನ ಮೂರು ವರ್ಷಗಳಲ್ಲಿ ಬಡವರಿಗೆ ಐದು ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿತ್ತು. ಉರುವಲು ಮತ್ತು ಬೆರಣಿ ಬಳಸಿ ಬಡವರು ಅಡುಗೆ ಮಾಡುತ್ತಿದ್ದರು. ಇದರಿಂದ ಪರಿಸರ ಮಾಲಿನ್ಯಕ್ಕೂಕಾರಣವಾಗುತ್ತಿತ್ತು. ಇದನ್ನು ನಾವು ತಪ್ಪಿಸುವಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ನಾನು ಬಾಲಕನಾಗಿದ್ದಾಗ ನನ್ನ ತಾಯಿ ಉರುವಲು ಮತ್ತು ಬೆರಣಿ ಬಳಸಿ ಅಡುಗೆ ಮಾಡುತ್ತಿದ್ದರು. ಆಗ ದಟ್ಟ ಹೊಗೆಯಿಂದ ನಮ್ಮ ತಾಯಿ ಕಷ್ಟಪಡುತ್ತಿದ್ದ ದೃಶ್ಯ ಈಗಲೂ ನನ್ನ ಕಣ್ಮುಂದೆ ಇದೆ ಎಂದು ಭಾವುಕರಾಗಿ ನುಡಿದರು.

Facebook Comments

Sri Raghav

Admin