ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ಚುನಾವಣೆ ಪ್ರಸಕ್ತ ವಿದ್ಯಮಾನಗಳ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

BJP--0011

ಬೆಂಗಳೂರು, ಮೇ 29- ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾದ ಹಿನ್ನಡೆ ಹಾಗೂ ಜೂ.11ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಕುರಿತ ಬಿಜೆಪಿ ಕೋರ್ ಕಮಿಟಿ ಸಭೆ ಇಂದು ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಗೆ ಕೋರ್‍ಕಮಿಟಿ ಸದಸ್ಯರಾದ ಅನಂತ್‍ಕುಮಾರ್, ಡಿ.ವಿ. ಸದಾನಂದಗೌಡ, ಪಹ್ಲಾದ್‍ಜೋಷಿ, ಜಗದೀಶ್‍ಶೆಟ್ಟರ್, ನಳೀನ್‍ಕುಮಾರ್ ಕಟೀಲ್, ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ನಡೆಯುತ್ತಿರುವ ಮೊದಲ ಕೋರ್‍ಕಮಿಟಿ ಸಭೆ ಇದಾಗಿರುವುದರಿಂದ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆ, ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚಿಸಲು ವಿಫಲವಾಗಿರುವುದು, ಗೆದ್ದೇ ಗೆಲ್ಲುತ್ತೇವೆ ಎಂಬ ಕೆಲವು ಜಿಲ್ಲೆಗಳಲ್ಲಿ ಸೋತಿರುವುದು ಸೇರಿದಂತೆ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಜಧಾನಿ ಬೆಂಗಳೂರು, ಬಳ್ಳಾರಿ, ಬೀದರ್, ಬೆಳಗಾವಿ ಹಾಗೂ ವಿಜಯಪುರ ಗಳಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಮಿಷನ್ 150 ಗುರಿ ಇಟ್ಟುಕೊಂಡರೂ ಕಡೆ ಪಕ್ಷ 120 ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ಬಿಜೆಪಿಯಲ್ಲಿತ್ತು.

ಆದರೆ, ಬಿಜೆಪಿ ಭದ್ರ ಕೋಟೆಗಳಲ್ಲೆ ಕಮಲ ಅರಳದಿರುವುದು ಪಕ್ಷಕ್ಕೆ ಹಿನ್ನಡೆ ಉಂಟಾಗಲು ಮುಖ್ಯ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರಿನಲ್ಲಿ 15 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿತ್ತು. ಅದೇ ರೀತಿ ಬೆಳಗಾವಿಯಲ್ಲಿ 12ರಿಂದ 14, ವಿಜಯಪುರದಲ್ಲಿ 5, ಬಳ್ಳಾರಿಯಲ್ಲಿ 6 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುವ ವಿಶ್ವಾಸ ಬಿಜೆಪಿಯಲ್ಲಿತ್ತು. ಆದರೆ, ಫಲಿತಾಂಶ ಬಂದಾಗ ಎಲ್ಲಾ ಲೆಕ್ಕಾಚಾರಗಳು ಬುಡಮೇಲಾಗಿದ್ದವು. ಎಲ್ಲಿ ಗೆಲ್ಲಲು ಹೆಚ್ಚಿನ ಪರಿಶ್ರಮ ಹಾಕಬೇಕು ಎಂಬ ಲೆಕ್ಕಾಚಾರವಿತ್ತೋ ಅಲ್ಲಿ ಅಭ್ಯರ್ಥಿಗಳು ಸುಲಭವಾಗಿ ಗೆದ್ದು ಬಂದಿದ್ದರು.  ಗೆದ್ದೇ ಗೆಲ್ಲುತ್ತೇವೆ ಎಂದು ಅದಮ್ಯ ವಿಶ್ವಾಸವಿದ್ದ ಕಡೆ ಬಿಜೆಪಿ ಲೆಕ್ಕಾಚಾರ ಕೈ ಕೊಟ್ಟಿತು. ಯಾವ ಕಾರಣಕ್ಕಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದರ ಬಗ್ಗೆ ಇಂದು ಚರ್ಚೆ ನಡೆಯಲಿದೆ.

2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ. ಹೀಗಾಗಿ ಇಂದಿನಿಂದಲೇ ಪಕ್ಷವನ್ನು ಸಂಘಟಿಸಲು ಕೆಲವು ರಣತಂತ್ರಗಳನ್ನು ನಾಯಕರು ರೂಪಿಸಲಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಹೋರಾಡುವುದು, ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಳ್ಳದೆ ಪಕ್ಷವನ್ನು ಗ್ರಾಮ ಮಟ್ಟದಿಂದ ಸಂಘಟಿಸಲು ಹಿರಿಯ ನಾಯಕರು ಸಲಹೆ ಮಾಡಲಿದ್ದಾರೆ. ಉಳಿದಂತೆ ಜೂ.11ರಂದು ವಿಧಾನಸಭೆ ಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಯಾರನ್ನು ಕಣಕ್ಕಿಳಿಸಬೇಕೆಂಬ ವಿಷಯದ ಬಗ್ಗೆಯೂ ಚರ್ಚೆ ನಡೆಯಲಿದೆ. ಹಾಲಿ ವಿಧಾನಪರಿಷತ್ ಸದಸ್ಯರಾದ ಬಿ.ಜೆ. ಪುಟ್ಟಸ್ವಾಮಿ, ಸೋಮಣ್ಣ ಬೇವಿನಮರದ್, ಭಾನುಪ್ರಕಾಶ್ ಹಾಗೂ ಡಿ.ಎಸ್.ವೀರಯ್ಯ ಅಧಿಕಾರಾವಧಿ ಮುಗಿಯಲಿದೆ. ತೆರವಾಗ ಲಿರುವ ಈ ಸ್ಥಾನಕ್ಕೆ ಯಾರನ್ನು ಕಣಕ್ಕಿಳಿಸ ಬೇಕು ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಲಿದೆ.

Facebook Comments

Sri Raghav

Admin