ವಿಧಾನಪರಿಷತ್ ಚುನಾವಣಾಧಿಕಾರಿ ಬದಲಾವಣೆ, ನಾಮಪತ್ರ ಸಲ್ಲಿಕೆಗೆ ನಿರಾಸಕ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Vidhana-Parishat

ಬೆಂಗಳೂರು, ಮೇ 29- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ ಈವರೆಗೂ ಒಂದೂ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಕುತೂಹಲಕಾರಿ ಅಂಶಗಳೆಂದರೆ ಈ ಬಾರಿ ಚುನಾವಣಾ ಆಯೋಗ ಚುನಾವಣಾಧಿಕಾರಿಯನ್ನು ಕಾರ್ಯದರ್ಶಿ ಬದಲಿಗೆ ಜಂಟಿ ಕಾರ್ಯದರ್ಶಿಯನ್ನು ನೇಮಿಸಿರುವುದು. ವಿಧಾನಸಭೆಯಿಂದ ವಿಧಾನಪರಿಷತ್‍ಗೆ 11 ಮಂದಿ ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಸಲು ಮೇ 24ರಿಂದ ಅಧಿಸೂಚನೆ ಜಾರಿಯಾಗಿದೆ. ಈ ತಿಂಗಳ ಅಂತ್ಯಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಯಾವ ರಾಜಕೀಯ ಪಕ್ಷಗಳಿಂದಲೂ ನಾಮಪತ್ರ ಸಲ್ಲಿಕೆಯಾಗಿಲ್ಲ. ವಿಧಾನಸಭೆಯ ಶಾಸಕರ ಸಂಖ್ಯಾಬಲ ಆಧರಿಸಿ ಬಿಜೆಪಿಯ 5, ಕಾಂಗ್ರೆಸ್ 4, ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಆದರೆ, ನಾಮಪತ್ರ ಸಲ್ಲಿಕೆಯಲ್ಲಿ ಯಾವ ಉತ್ಸವವೂ ಕಂಡು ಬಂದಿಲ್ಲ. ಕಾಂಗ್ರೆಸ್, ಜೆಡಿಎಸ್ ಸಂಪುಟ ರಚನೆಯಲ್ಲಿ ಮುಳುಗಿದ್ದು, ಬಿಜೆಪಿಯಲ್ಲಿ ಸೋಲಿನ ಆತ್ಮವಿಮರ್ಶೆಯಲ್ಲೇ ವಿಧಾನಪರಿಷತ್‍ನ ಚುನಾವಣೆಯನ್ನು ಮರೆತಂತಿವೆ.

ಚುನಾವಣಾಧಿಕಾರಿ ಬದಲಾವಣೆ:
ವಿಧಾನಸಭೆಯಿಂದ ನಡೆಯುವ ವಿಧಾನ ಪರಿಷತ್ ಸದಸ್ಯರು ಮತ್ತು ರಾಜಸ್ಯಸಭಾ ಸದಸ್ಯರ ಚುನಾವಣೆಗಳಿಗೆ ಸಾಮಾನ್ಯವಾಗಿ ವಿಧಾನಸಭೆಯ ಕಾರ್ಯದರ್ಶಿಯವರೇ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಕಾರ್ಯ ದರ್ಶಿಯಾದ ಎಸ್.ಮೂರ್ತಿ ಬದಲಾಗಿ ಜಂಟಿ ಕಾರ್ಯದರ್ಶಿಯಾದ ಎಂ.ಎಸ್.ಕುಮಾರಸ್ವಾಮಿ ಅವರನ್ನು ಚುನಾವಣಾ ಆಯೋಗ ಚುನಾವಣಾಧಿಕಾರಿಯನ್ನಾಗಿ ನಿಯೋಜನೆ ಮಾಡಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.  ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಹಿರಿಯ ಸದಸ್ಯರಾದ ಕಾಗೋಡು ತಿಮ್ಮಪ್ಪ ಮತ್ತು ಬಾಬೂರಾವ್ ಚಿಂಚನಸೂರ್ ಅವರಿಗೆ ಮತದಾನ ಮಾಡಲು ಗೊಂದಲವಾಗಿತ್ತು. ಆ ಸಂದರ್ಭದಲ್ಲಿ ವಿಧಾನಸಭೆಯ ಕಾರ್ಯದರ್ಶಿ ಅವರು ಎರಡನೇಯ ಮತ ಪತ್ರ ನೀಡಿದ್ದರು. ಅದು ತೀವ್ರ ವಿವಾದ ಹುಟ್ಟುಹಾಕಿ ರಾಷ್ಟ್ರದ ಗಮನ ಸೆಳೆದು ಕಾನೂನಿನ ಸಾಧಕ-ಬಾಧಕಗಳ ಚರ್ಚೆಗೆ ಗ್ರಾಸವಾಗಿತ್ತು.

ಚುನಾವಣಾ ಆಯೋಗ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಒಬ್ಬ ಮತದಾನನಿಗೆ ಎರಡು ಮದಾನ ಪತ್ರಕೊಟ್ಟಿದ್ದು ತಪ್ಪು ಎಂದು ಹೇಳಿತ್ತು. ಆದರೆ, ಆ ತಪ್ಪಿಗೆ ಯಾವ ಶಿಕ್ಷೆ ಎಂಬುದು ನಿರ್ಧಾರವಾಗಿಲ್ಲ. ಈ ನಡುವೆ ಎದುರಾದ ವಿಧಾನಪರಿಷತ್‍ನ ಚುನಾವಣೆಗೆ ಚುನಾವಣಾಧಿಕಾರಿಯನ್ನು ಬದಲಾವಣೆ ಮಾಡುವ ಮೂಲಕ ವಿವಾದಿತ ಕಾರ್ಯದರ್ಶಿಯವರನ್ನು ಚುನಾವಣಾ ಪ್ರಕ್ರಿಯಿಂದ ದೂರ ಇಟ್ಟಿದೆ.  ಇದು ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ನಾಮಪತ್ರ ಸಲ್ಲಿಕೆ ಮತ್ತು ಇತರೆ ಚುನಾವಣಾ ಪ್ರಕ್ರಿಯೆಗೆ ವಿಧಾನಸಭೆಯ ಮೊದಲ ಮಹಡಿಯ 119 ಕೊಠಡಿ ಸಂಖ್ಯೆಯನ್ನು ನಿಗದಿಮಾಡಲಾಗಿದೆ.  ಆದರೆ, ಅಲ್ಲಿ ಚುನಾವಣಾ ಕೆಲಸಗಳ ಬದಲಾಗಿ ವಿಧಾನಸಭೆಯ ಆಂತರಿಕ ಇಲಾಖಾ ವಿಚಾರಣೆಗಳು ನಡೆಯುತ್ತಿವೆ.

Facebook Comments

Sri Raghav

Admin