ನೌಕರರ ಮುಷ್ಕರ : ಬ್ಯಾಂಕ್, ಎಟಿಎಂ ಇಲ್ಲದೆ ಗ್ರಾಹಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Bank-Strike--01
ಬೆಂಗಳೂರು, ಮೇ 30- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರು ಇಂದು ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಬಂದ್ ಬಹುತೇಕ ಕಡೆ ಯಶಸ್ವಿಯಾಗಿದ್ದು, ಗ್ರಾಹಕರು ಪರದಾಡುವಂತಾಯಿತು. ಅಖಿಲ ಭಾರತ ಬ್ಯಾಂಕ್ ಯೂನಿಯನ್ ಕರೆ ಕೊಟ್ಟಿದ್ದ ಬಂದ್‍ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ರಾಜಧಾನಿ ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬೀದರ್, ಗುಲ್ಬರ್ಗ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬ್ಯಾಂಕುಗಳ ವಹಿವಾಟು ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.

ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳು ಕೂಡ ಬಂದ್ ಆಗಿದ್ದ ಪರಿಣಾಮ ದಿನನಿತ್ಯದ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿತು. ಇಂದು ಬ್ಯಾಂಕ್ ಬಂದ್ ಆಗಲಿದೆ ಎಂಬುದನ್ನು ತಿಳಿಯದಿದ್ದ ಸಾವಿರಾರು ಗ್ರಾಹಕರು ಎಂದಿನಂತೆ ಬ್ಯಾಂಕ್‍ಗೆ ಬಂದು ನಿರಾಶೆಯಿಂದ ಹಿಂದಿರುಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.  ಬೆಂಗಳೂರಿನ ಮೆಜೆಸ್ಟಿಕ್, ಗಾಂಧಿನಗರ, ರಾಜಾಜಿನಗರ, ವಿಜಯನಗರ, ಜಯನಗರ ಸೇರಿದಂತೆ ಅನೇಕ ಕಡೆ ಬೆಳಗ್ಗೆ 10ಗಂಟೆಗೆ ಬ್ಯಾಂಕ್‍ನಲ್ಲಿ ದಿನನಿತ್ಯದ ವಹಿವಾಟು ನಡೆಸಲು ಸಾರ್ವಜನಿಕರು ಆಗಮಿಸಿದ್ದರು. ಆದರೆ, ಅಲ್ಲಿ ಇಂದು ಮತ್ತು ನಾಳೆ ಬ್ಯಾಂಕ್ ಬಂದ್ ಆಗಿದೆ ಎಂಬ ಫಲಕಗಳನ್ನು ಕಂಡು ನಿರಾಶೆಯಿಂದ ಮನೆಗೆ ಹಿಂದಿರುಗಿದರು.

ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ, ಕೆನರಾಬ್ಯಾಂಕ್, ಆಂಧ್ರಾಬ್ಯಾಂಕ್, ಐಸಿಐಸಿ ಬ್ಯಾಂಕ್, ಆಕ್ಸಿಸ್, ಕೋಟೆಕ್ ಮಹಿಂದ್ರ ಸೇರಿದಂತೆ ಸಹಕಾರಿ ಬ್ಯಾಂಕ್‍ಗಳು ಕೂಡ ಬಂದ್‍ಗೆ ಬೆಂಬಲ ನೀಡಿದ್ದವು.  ಸಾಮಾನ್ಯವಾಗಿ ವ್ಯಾಪಾರ ವಹಿವಾಟು ನಡೆಸುವವರು ಬ್ಯಾಂಕ್ ಮೇಲೆ ಹೆಚ್ಚು ಅವಲಂಬಿತವಾಗಿದ್ದರು. ತಮ್ಮ ವಹಿವಾಟು ನಿಂತಿದ್ದರಿಂದ ಕೆಲವರು ಗೊಣಗುತ್ತಲೇ ವಾಪಸಾದರು.

ಎಟಿಎಂಗೆ ಮುಗಿಬಿದ್ದ ಜನರು:
ಬ್ಯಾಂಕ್ ವಹಿವಾಟುಗಳು ಸ್ಥಗಿತಗೊಂಡಿದ್ದರಿಂದ ಬಹುತೇಕ ಜನರು ಎಟಿಎಂ ಬಳಿ ದೌಡಾಯಿಸಿದ್ದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬ್ಯಾಂಕ್‍ನಲ್ಲಿ ಹಣ ಪಡೆಯಲು ಸಾಧ್ಯವಾಗದ ಕಾರಣ ದಿನನಿತ್ಯದ ವಹಿವಾಟುಗಳಿಗೆ ಹಣ ಪಡೆಯಲು ಗ್ರಾಹಕರು ಎಟಿಎಂನಲ್ಲಿ ಸರತಿಯಲ್ಲಿ ನಿಂತು ಹಣ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು.

ಬೇಡಿಕೆಗಳೇನು:
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂಬುದು ಬ್ಯಾಂಕ್ ನೌಕರರ ಒತ್ತಾಯವಾಗಿದೆ. ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರದ ಯೋಜನೆಗಳಾದ ಜನಧನ್, ಅಟಲ್ ಪಿಂಚಣಿ ಯೋಜನೆ, ಮುದ್ರಾ ಹಾಗೂ ನೋಟು ಅಮಾನೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ.

ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಿದ್ದೇವೆ. ಸರ್ಕಾರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿತ್ತು. ಕೇವಲ ಶೇ.2ರಷ್ಟು ಮಾತ್ರ ಹೆಚ್ಚಳ ಮಾಡುವುದಾಗಿ ಹೇಳಿರುವುದರಿಂದ ಬ್ಯಾಂಕ್ ನೌಕರರು ಮುಷ್ಕರರು ಕರೆ ಕೊಟ್ಟಿದ್ದಾರೆ. ಭಾರತೀಯ ಬ್ಯಾಂಕುಗಳ ಸಂಸ್ಥೆ ಕಳೆದ ನವೆಂಬರ್ 1, 2012ರಿಂದ ಆಗಸ್ಟ್ 31, 2017ರವರೆಗೆ ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಇಂದಿನ ಬೆಲೆ ಹೆಚ್ಚಳದಲ್ಲಿ ಶೇ.2ಕ್ಕಿಂತ ವೇತನವನ್ನು ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿತ್ತು. ಈ ಸಂಬಂಧ ಹಲವಾರು ಬಾರಿ ಮಾತುಕತೆ ನಡೆದರೂ ಸಂಧಾನ ಮುರಿದುಬಿದ್ದ ಪರಿಣಾಮ ಮುಷ್ಕರಕ್ಕೆ ಕರೆ ಕೊಡಲಾಗಿದೆ. ನಾಳೆಯೂ ಮುಷ್ಕರ ಮುಂದುವರಿಯಲಿದ್ದು, ಸಾರ್ವಜನಿಕರಿಗೆ ಮತ್ತಷ್ಟು ಬಿಸಿ ತಟ್ಟಲಿದೆ.

Facebook Comments

Sri Raghav

Admin