ನಿರೂಪಕ ಚಂದನ್ ನಿಧನದಿಂದ ಮನನೊಂದು ಮಗನನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಈ ಸುದ್ದಿಯನ್ನು ಶೇರ್ ಮಾಡಿ

Chandan-Suicide--01

ಬೆಂಗಳೂರು, ಮೇ 31- ಪತಿಯ ಅಗಲಿಕೆಯ ನೋವಿನಿಂದ ಹೊರಬರಲಾಗದೆ ನೊಂದ ನಿರೂಪಕನ ಪತ್ನಿ ಮಗನನ್ನು ಕೊಂದು ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥವಾಗಿರುವ ಹೃದಯ ವಿದ್ರಾವಕ ಘಟನೆ ಇಂದು ಬೆಳಗ್ಗೆ ನಡೆದಿದೆ.  ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ವೀಣಾ (38), ಮಗ ತುಷಾರ್ (13) ನನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಖಾಸಗಿ ವಾಹಿನಿಯೊಂದರ ನಿರೂಪಕರಾಗಿದ್ದ ಚಂದನ್, ಕಳೆದ 24ರಂದು ದಾವಣಗೆರೆ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ಇವರ ಕುಟುಂಬ ಶೋಕದಲ್ಲಿ ಮುಳುಗಿತ್ತು. ಚಂದನ್ ಅಗಲಿಕೆಯಿಂದ ಅವರ ಪತ್ನಿ ವೀಣಾ, ಮಗ ತುಷಾರ್ ಕಂಗಾಲಾಗಿದ್ದರು.   ಪತಿಯ ಅಗಲಿಕೆಯ ನೋವಿನಿಂದ ಹೊರಬರಲಾಗದೆ ವೀಣಾ ಆತ್ಮಹತ್ಯೆಗೆ ನಿರ್ಧರಿಸಿ ಇಂದು ಬೆಳಗ್ಗೆ ಮಗನ ಕತ್ತು ಕೊಯ್ದು ಕೊಲೆ ಮಾಡಿ ನಂತರ ಆಕೆಯೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಎಂದಿನಂತೆ ಶಾಲಾ ವಾಹನ ತುಷಾರ್‍ನನ್ನು ಕರೆದುಕೊಂಡು ಹೋಗಲು ಮನೆ ಬಳಿ ಬಂದಾಗ ಬಾಗಿಲು ಹಾಕಿರುವುದನ್ನು ಗಮನಿಸಿ ಬಾಗಿಲು ತಳ್ಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಅಲ್ಲದೆ, ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದ ವೀಣಾ ಅವರನ್ನು ನೆರೆಹೊರೆಯವರ ಸಹಾಯದಿಂದ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಇವರ ಸ್ಥಿತಿಯೂ ಚಿಂತಾಜನಕವಾಗಿದೆ.   ಈ ಘಟನೆಯಿಂದಾಗಿ ಸೋಮೇಶ್ವರ ಬಡಾವಣೆಯಲ್ಲಿ ಸೂತಕದ ಛಾಯೆ ಆವರಿಸಿದೆ. ದೊಡ್ಡಬಳ್ಳಾಪುರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin