ಬುಡಬುಡಕೆಯವನ ಮಾತುಕೇಳಿ ಮನೆಯಲ್ಲಿ ಹಳ್ಳ ತೊಡಿಸಿ 1ಲಕ್ಷ ಹಣ ಕಳೆದುಕೊಂಡ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

Doddaballapur--01

ದೊಡ್ಡಬಳ್ಳಾಪುರ, ಜೂ.1- ಮನುಷ್ಯನಿಗೆ ಆಸೆ ಇರಬೇಕು. ಆದರೆ ಅತಿ ಆಸೆ ಪಟ್ಟರೆ ಇರೋದನ್ನು ಕಳೆದುಕೊಳ್ಳಬೇಕು ಎಂಬುದಕ್ಕೆ ಇಲ್ಲೊಬ್ಬ ಮಹಿಳೆ ಅವನ್ಯಾರೋ ಬುಡಬುಡಕೆಯವನು ಹೇಳಿದ ಮಾತಿಗೆ 1 ಲಕ್ಷ ಹಣವನ್ನು ಕಳೆದುಕೊಂಡ ಪ್ರಸಂಗ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ತಂಬೇನಹಳ್ಳಿಯ ನರಸಮ್ಮ ಎಂಬುವರ ಮನೆಗೆ ಬಂದ ಬುಡಬುಡಕೆಯವನು ನಿಮ್ಮ ಮನೆಯಲ್ಲಿ ನಿಧಿ ಇದೆ ಅಂತಾ ಭವಿಷ್ಯ ಹೇಳಿದ್ದನಂತೆ. ಇವನ ಮಾತನ್ನು ನಂಬಿ ಮಹಿಳೆ ನಿಧಿ ಹುಡುಕಾಟ ಪ್ರಾರಂಭಿಸಿಯೇ ಬಿಟ್ಟಳು. ದಾವಣಗೆರೆ ಮೂಲದ ನಾಲ್ವರನ್ನು ಕರೆಸಿ ಮನೆಯಲ್ಲಿ 50 ಅಡಿ ಹಳ್ಳ ತೋಡಿಸಿಯೇ ಬಿಟ್ಟಳು.

ಆದರೆ ನಿಧಿನೂ ಸಿಗಲಿಲ್ಲ. ಏನೂ ಸಿಗಲಿಲ್ಲ. ಇದೀಗ ನಾಲ್ವರು ದೊಡ್ಡಬೆಳವಂಗಲ ಠಾಣೆಯ ಪೊಲೀಸರ ಅತಿಥಿಯಾದರು. ದಾವಣಗೆರೆಯಿಂದ ಬಂದ ಅರುಣ್‍ಕುಮಾರ್, ಚಂದ್ರಶೇಖರ್, ಅಭಿಷೇಕ್, ರಂಗನಾಯಕ್ ಇವರುಗಳು ನರಸಮ್ಮ ಅವರ ಮನೆಯನ್ನು ಪರಿಶೀಲಿಸಿ ಹೌದು. ನಿಮ್ಮ ಮನೆಯಲ್ಲಿ ನಿಧಿ ಇದೆ ಇದಕ್ಕಾಗಿ 21 ದಿನ ಪೂಜೆ ಮಾಡಬೇಕು. ಅಂತ ಹೇಳಿ ಎಲ್ಲಾ ಸಿದ್ಧತೆ ಮಾಡಿಕೊಂಡು 1 ಲಕ್ಷ ರೂ. ಹಣವನ್ನು ತೆಗೆದುಕೊಂಡರು.

ನರಸಮ್ಮ ಮಗನಿಗೆ ತಿಳಿಯದಂತೆ 1 ಲಕ್ಷ ಹಣನೂ ಕೊಟ್ಟಳು. ಅದೇಗೋ ಮಗನಿಗೆ ಅನುಮಾನ ಬಂದು ವಿಚಾರಿಸಿದಾಗ ನಮ್ಮ ಮನೆಯಲ್ಲಿ ನಿಧಿ ಶೋಧ ಕಾರ್ಯ ನಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಮಾಹಿತಿ ಆಧಾರದ ಮೇರೆಗೆ ದೊಡ್ಡಬೆಳವಂಗಲ ಠಾಣೆಯ ಎಸ್‍ಐ ಗಜೇಂದ್ರ ಹಾಗೂ ಪಿಎಸ್‍ಐ ಶಿವಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅದಕ್ಕೆ ಹೇಳೋದು. ಅತಿ ಆಸೆ ಗತಿ ಕೇಡು ಎಂಬ ಗಾದೆಗೆ ಈ ಒಂದು ಪ್ರಸಂಗ ತಾಜಾ ಉದಾಹರಣೆಯಾಗಿದೆ.

Facebook Comments

Sri Raghav

Admin