ಸಂಪುಟ ವಿಸ್ತರಣೆ ಬಗ್ಗೆ ಮಾತಾಡೋ ನೈತಿಕತೆ ಯಡಿಯೂರಪ್ಪನವರಿಗಿದೆಯಾ.? ಸಿಎಂ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--And-Yadiyurapp

ಬೆಂಗಳೂರು, ಜೂ.1- ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಬಿಎಸ್‍ವೈಗೆ ಯಾವ ನೈತಿಕತೆ ಇದೆ, ಏನು ಮಾಡಬೇಕೆಂಬುದನ್ನು ಅವರಿಂದ ಕಲಿಯಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ ಎರಡು ತಿಂಗಳಾದರೂ ಸಚಿವ ಸಂಪುಟ ರಚನೆಯಾಗಿರಲಿಲ್ಲ. ಈ ಬಗ್ಗೆ ಅವರಿಗೆ ಅರಿವಿಲ್ಲವೆ ಎಂದು ಪ್ರಶ್ನಿಸಿದ ಅವರು, ಯಾವಾಗ ಸರ್ಕಾರ ಬಿದ್ದು ಹೋಗುತ್ತದೆ ಎಂಬುದನ್ನು ಬಿಎಸ್‍ವೈ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಮ್ಮದು ಸಮ್ಮಿಶ್ರ ಸರ್ಕಾರ. ಇಲ್ಲಿ ಚರ್ಚೆ ಮಾಡಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಏಕಪಕ್ಷದ ಸರ್ಕಾರವಲ್ಲ. ಹಾಗಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ನಮಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಹೇಳಿದರು. ಆಡಳಿತದ ಬಗ್ಗೆ ರಾಹುಲ್‍ಗಾಂಧಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ರಾಜ್ಯ ನಾಯಕರು ಕೂಡ ಒಪ್ಪಿದ್ದಾರೆ ಎಂದು ಹೇಳಿದರು.

ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಅವರು ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಬಹಳ ದೊಡ್ಡ ಉದ್ಯಮಿ. ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುವವರು. ಅವರೊಂದಿಗೆ ಚರ್ಚಿಸಿ ಸಾಕಷ್ಟು ಸಲಹೆಗಳನ್ನು ಪಡೆದಿದ್ದೇನೆ. ನನ್ನಷ್ಟು ಸುಲಭವಾಗಿ ನಿಮಗೆ ಸಿಗುವವರು ಯಾರೂ ಇಲ್ಲ ಎಂದು ಮಾಧ್ಯಮದವರಿಗೆ ಹೇಳಿದ ಅವರು, ನಾನೊಂದು ಹೇಳುತ್ತೇನೆ, ನೀವೊಂದು ರೀತಿ ತಿರುಚಿ ಹಾಕೋದು ಬೇಡ. ಐದಾರು ಬಾರಿ ಬಂದರೆ ನಾನೇನು ಹೇಳುವುದು ಎಂದು ಮಾಧ್ಯಮದವರ ವಿರುದ್ಧ ಎಚ್‍ಡಿಕೆ ಗರಂ ಆದರು. ತೊಂದರೆಯಾಗದಂತೆ ತೀರ್ಮಾನ: ಕಾಲಾ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ತೀರ್ಮಾನ ಕೈಗೊಂಡಿದೆ. ಕನ್ನಡಿಗರು ಕಾಲ ಚಿತ್ರವನ್ನು ತಿರಸ್ಕರಿಸಿದ್ದಾರೆ. ಹಲವಾರು ಕನ್ನಡಪರ ಸಂಘಟನೆಗಳು ಕೂಡ ಚಿತ್ರ ಬಿಡುಗಡೆ ವಿರುದ್ಧ ಹೋರಾಟ ಮಾಡುತ್ತಿವೆ. ಯಾರಿಗೂ ತೊಂದರೆಯಾಗದಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

Facebook Comments

Sri Raghav

Admin