ಕೆಜಿಎಫ್ ಜೀವನಾಡಿ ಸ್ವರ್ಣ ರೈಲಿಗೆ ಬದಲು ಮೆಮು ರೈಲು ಓಡಿಸಲು ನಿರ್ಧಾರ..?

ಈ ಸುದ್ದಿಯನ್ನು ಶೇರ್ ಮಾಡಿ

KGF--01
ಕೆಜಿಎಫ್, ಜೂ.2- ನಗರದ ಜನತೆಯ ಜೀವನಾಡಿಯಾಗಿರುವ ಸ್ವರ್ಣ ರೈಲಿಗೆ ಬದಲು ಕಡಿಮೆ ಬೋಗಿಗಳಿರುವ ಮೆಮು ರೈಲನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿನ್ನದ ಗಣಿ ಮುಚ್ಚಿದ ನಂತರ ಗಣಿ ಕಾರ್ಮಿಕರಿಗೆ ಆಸರೆಯಾಗಿದ್ದ ಸ್ವರ್ಣ ರೈಲು ಬೆಳಿಗ್ಗೆ ಮಾರಿಕುಪ್ಪಂ ರೈಲು ನಿಲ್ದಾಣದಿಂದ ಬೆಂಗಳೂರಿಗೆ ಹೋಗುತ್ತಿದ್ದು, ಪ್ರತಿನಿತ್ಯ ಸಹಸ್ರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅದರಲ್ಲಿ ದಿನ ನಿತ್ಯ ಸಂಚಾರ ಮಾಡುವವರೆ ಅಧಿಕ ಸಂಖ್ಯೆಯಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಜನಪ್ರಿಯವಾಗಿರುವ ಸ್ವರ್ಣ ರೈಲನ್ನು ಈ ಹಿಂದೆ ಕೂಡ ರದ್ದುಗೊಳಿಸಿ ಮೆಮು ರೈಲನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿತ್ತು. ಆದರೆ ಸರ್ವ ಪಕ್ಷಗಳು ಮತ್ತು ದಿನನಿತ್ಯ ಪ್ರಯಾಣಿಕರು ನಡೆಸಿದ ಉಗ್ರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ, ನಂತರ ಮೆಮು ರೈಲನ್ನು ವಾಪಸ್ ಪಡೆದು, ಸಾಂಪ್ರದಾಯಿಕ ರೈಲನ್ನೇ ಮುಂದುವರೆಸಿತ್ತು.

ಆದರೆ ದಿನನಿತ್ಯ ಪ್ರಯಾಣಿಕರಿಗೆ ಅಘಾತವಾಗುವಂತೆ ಮೇ 31 ರಂದು ಆದೇಶ ಹೊರಡಿಸಿದ ವಿಭಾಗೀಯ ರೈಲ್ವೆ ಮಾನೇಜರ್ ಸಕ್ಸೇನಾ, ಸಾಂಪ್ರದಾಯಿಕ ರೈಲು ಸ್ವರ್ಣ ರೈಲಿನ ಬದಲು ಮೆಮು ರೈಲನ್ನು ಓಡಿಸಿ, ವರದಿ ನೀಡುವಂತೆ ಆದೇಶ ಮಾಡಿದ್ದರು. ಈ ಸೂಚನೆ ಜನರನ್ನು ರೊಚ್ಚಿಗೇಳಿಸಬಹುದೆಂಬ ಹಿನ್ನೆಲೆಯಲ್ಲಿ ನಗರದ ಐದೂ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Facebook Comments

Sri Raghav

Admin