ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ : ಡಿಸಿಎಂ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಜೂ.2- ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಈಗಾಗಲೇ ನಿರ್ಧಾರ ಮಾಡಿವೆ. ಸ್ಥಾನ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲವಾಗದಂತೆ ಒಟ್ಟಾಗಿ ಕುಳಿತು ಚರ್ಚೆ ಮಾಡಿ ಚುನಾವಣಾ ಪೂರ್ವ ಮೈತ್ರಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದಾಗಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ನೂತನ ಅರ್ಚಬಿಷಫ್ ಫೀಟರ್ ಮಚಾದೋ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈದ್ಧಾಂತಿಕವಾಗಿ ಎರಡು ಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಬೇಕೆಂದು ನಿರ್ಧಾರ ಮಾಡಿದ್ದೇವೆ. ಈವರೆಗೂ ಕ್ಷೇತ್ರಗಳ ಹಂಚಿಕೆಯಾಗಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ಹಂಚಿಕೆ ಮಾಡಿಕೊಳ್ಳಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಕುಳಿತು ಚರ್ಚೆ ಮಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಚರ್ಚೆಯಾಗಿದೆ, ಸಮಯವೂ ನಿಗದಿಯಾಗಿದೆ. ಎರಡೂ ಪಕ್ಷಗಳ ನಡುವೆ ಖಾತೆ ಹಂಚಿಕೆಯಾಗಿದೆ. ಸಂಪುಟಕ್ಕೆ ಯಾರನ್ನು ಸೇರಿಕೊಳ್ಳಬೇಕು ಎಂಬ ಬಗ್ಗೆ ಪಕ್ಷದದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಸಂಪುಟದಲ್ಲಿ ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡದೆ ಕೆಲವು ಸ್ಥಾನಗಳನ್ನು ಉಳಿಸಿಕೊಳ್ಳಲಾಗುತ್ತದೆ. ಕಾಂಗ್ರೆಸ್ ಪಾಲಿಗೆ ಬಂದಿರುವ 22 ಸ್ಥಾನಗಳಲ್ಲಿ ಪಕ್ಷೇತರರಿಗೂ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆದಿದೆ. ಸಚಿವ ಸಂಪುಟಕ್ಕೆ ಹಿರಿಯರು-ಕಿರಿಯರು ಇಬ್ಬರೂ ಬೇಕು ಎಂದು ಹೇಳಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಮೇಲಿನ ಸಿಬಿಐ ದಾಳಿ ರಾಜಕೀಯ ದ್ವೇಷದ ಕ್ರಮವಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದರು. ಡಿ.ಕೆ.ಶಿವಕುಮಾರ್ ಬೆಂಬಲಿಗರನ್ನು ವಿಚಾರಣೆ ನಡೆಸಿ ಡಿ.ಕೆ.ಸುರೇಶ್ ಅವರ ಹೆಸರು ಹೇಳುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಅದು ನಿಜವೇ ಆಗಿದ್ದರೆ ಖಂಡನೀಯ ಎಂದು ಹೇಳಿದರು.

ಕೆಪಿಸಿಸಿಗೆ ಶೀಘ್ರವೇ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ನನಗಿಂತಲೂ ಸಮರ್ಥವಾಗಿ ಕೆಲಸ ಮಾಡುವವರು ಪಕ್ಷದಲ್ಲಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹೈಕಮಾಂಡ್ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಆನಂತರ ನಾನು ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಉತ್ತರಿಸಿದರು. ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದೆ, ಚಾರ್ಜ್‍ಶೀರ್ಟ್ ಸಲ್ಲಿಕೆಯಾಗಿದೆ. ಸದ್ಯದಲ್ಲೇ ತನಿಖೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ನೂತನ ಅರ್ಚಬಿಷಫ್ ಆಗಿ ನೆಮಕಗೊಂಡಿರುವ ಫೀಟರ್ ಮಚಾದೋ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಪೀಟರ್ ಮಚಾದೋ ಅವರು ಸಂಸ್ಥೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Facebook Comments

Sri Raghav

Admin