ನಿಫಾ ಭೀತಿಯಿಂದ ಬೆಂಗಳೂರಲ್ಲಿ ‘ಆಪರೇಷನ್ ವರಾಹ ‘, ತಲೆನೋವಾದ ಬಾವುಲಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Bangalore-Pig--01

ಬೆಂಗಳೂರು, ಜೂ. 2- ಸರ್… ಸರ್… ನಮ್ಮ ಏರಿಯಾದಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದೆ. ಪ್ಲೀಸ್ ಬೇಗ ಬಂದು ಹಿಡಿಯಿರಿ… ನಮ್ಮ ಮನೆ ಮುಂದೆ ಇರುವ ಮರದಲ್ಲಿ ಬಾವುಲಿ ನೇತಾಡುತ್ತಿವೆ ಪ್ಲೀಸ್ ಹಿಡಿಯಿರಿ… -ಹೀಗೆ ಪ್ರತಿನಿತ್ಯ ನೂರಾರು ದೂರವಾಣಿ ಕರೆಗಳು ಬಿಬಿಎಂಪಿ ವನ್ಯಜೀವಿ ವಿಭಾಗಕ್ಕೆ ಬರುತ್ತಿವೆ. ಹಾಗಾಗಿ ನಗರದಲ್ಲಿ ಆಪರೇಷನ್ ವರಾಹ ಪ್ರಾರಂಭವಾಗಿದೆ. ಹಂದಿಗಳನ್ನು ಹಿಡಿಯೋ ಗುತ್ತಿಗೆ ಪಡೆದಿರುವವರಿಗೆ ಸಮಯವೇ ಸಾಲುತ್ತಿಲ್ಲ. ಇನ್ನು ಹದಿನೈದು ದಿನಗಳು ಕಳೆದರೂ ಹಂದಿ ಹಿಡಿಯೋ ಕೆಲಸ ಪೂರ್ಣವಾಗುವಂತೆ ಕಾಣುತ್ತಿಲ್ಲ.

ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿರುವುದು, ನಿಫಾ ವೈರಾಣು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಗರದಿಂದ 5ಕಿಮೀ ಹೊರಗೆ ಹಂದಿ ಸಾಕಣೆ ಮಾಡಬೇಕು ಎಂದು ಬಿಬಿಎಂಪಿ ಸೂಚಿಸಿದೆ.  ಈ ಹಿಂದೆಯೂ ನಗರದ ಹೊರಗಡೆ ಹಂದಿ ಸಾಕಣೆ ಮಾಡಿ ಎಂದು ಪಾಲಿಕೆ ಲೋನ್ ಸಹ ಕೊಟ್ಟಿತ್ತು. ಆದರೂ ಬಹಳಷ್ಟು ಮಂದಿ ಹಂದಿಗಳನ್ನು ಹೊರಗೆ ಸಾಕುತ್ತಿಲ್ಲ. ಈಗ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿರುವುದರಿಂದ ವರಹಾ (ಹಂದಿ) ಬೇಟೆ ಪ್ರಾರಂಭವಾಗಿದೆ.

Bangalore-Pig--04

ಕೇರಳದಲ್ಲಿ ನಿಫಾ ವೈರಾಣುವಿನಿಂದ 13ಕ್ಕೂ ಹೆಚ್ಚು ಮಂದಿ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದಿರುವ ನಗರದ ನಾಗರಿಕರು ನಗರಕ್ಕೂ ಎಲ್ಲಿ ವೈರಾಣು ಹರಡುವುದೋ ಎಂಬ ಭೀತಿಯಲ್ಲಿದ್ದಾರೆ. ಹಾಗಾಗಿ ಪ್ರತಿನಿತ್ಯ ವನ್ಯಜೀವಿ ವಿಭಾಗಕ್ಕೆ ನೂರಾರು ಕರೆಗಳು ಬರುತ್ತಲೇ ಇವೆ. ಇದರಿಂದಾಗಿ ವನ್ಯಜೀವಿ ವಿಭಾಗದವರಿಗೆ ಫೋನ್ ಕರೆಗಳನ್ನು ಸ್ವೀಕರಿಸುವುದಾ, ಹಂದಿ ಬೇಟೆಗೆ ಆದ್ಯತೆ ನೀಡುವುದಾ, ಇಲ್ಲ ಬಾವುಲಿ ಬೇಟೆಗೆ ಹೋಗುವುದಾ ಎಂಬ ಗೊಂದಲದ ಗೂಡಲ್ಲಿ ಸಿಲುಕಿದ್ದಾರೆ.

Bangalore-Pig--03

ಇನ್ನೂ 15 ದಿನ ಹಂದಿ ಬೇಟೆ ಮುಂದುವರಿಯಲಿದೆ. ನಗರದಲ್ಲಿ ಏನಿಲ್ಲವೆಂದರೂ 10 ರಿಂದ 15 ಸಾವಿರ ಹಂದಿಗಳಿವೆ. ಮಳೆ ಬೀಳುತ್ತಿರುವುದರಿಂದ ಇವು ಕೆಸರಲ್ಲಿ ನುಸುಳಿಕೊಂಡುಬಿಡುತ್ತವೆ. ಇದರಿಂದಾಗಿ ಇವುಗಳನ್ನು ಹಿಡಿಯುವುದು ಕಷ್ಟವಾಗುತ್ತಿದೆ. ಆದರೂ ಗುತ್ತಿಗೆದಾರರು ಹರಸಾಹಸ ಪಟ್ಟು ಹಂದಿ ಹಿಡಿಯುತ್ತಿದ್ದಾರೆ. ಇವುಗಳನ್ನು ಹಿಡಿದು ಮಾರಾಟ ಮಾಡಿ ಹಣ ಸಂಪಾದಿಸಬಹುದಾಗಿರುವುದರಿಂದ ಇದು ಇವರಿಗೆ ಲಾಭದಾಯಕವೂ ಆಗಿದೆ. ಹಾಗಾಗಿ ಎಷ್ಟೇ ಕಷ್ಟವಾದರೂ ಹಂದಿಗಳನ್ನು ಹಿಡಿಯುತ್ತಾರೆ. ಈಗಾಗಲೇ ಎಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ಯಲಹಂಕ, ದಾಸರಹಳ್ಳಿ, ಮಹದೇವಪುರ ವಲಯಗಳಲ್ಲಿ ಹಂದಿ ಬೇಟೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜರಾಜೇಶ್ವರಿನಗರ ಮತ್ತಿತರ ಪ್ರದೇಶಗಳಲ್ಲೂ ಆಪರೇಷನ್ ವರಾಹ ನಡೆಯಲಿದೆ.

Bangalore-Pig--02

ತಲೆನೋವಾದ ಬಾವುಲಿ:
ಈ ಮೊದಲು ಬಾವುಲಿಯಿಂದಲೇ ನಿಫಾ ವೈರಾಣು ಹರಡುತ್ತದೆ ಎನ್ನಲಾಗಿತ್ತು. ಆದರೆ, ತಜ್ಞ ವೈದ್ಯರು ಬಾವುಲಿಯಿಂದ ನಿಫಾ ಹರಡುವುದಿಲ್ಲ ಎಂದು ಹೇಳಿದ್ದರೂ ಜನರಲ್ಲಿ ಭೀತಿ ದೂರವಾಗಿಲ್ಲ. ಕಬ್ಬನ್‍ಪಾರ್ಕ್, ಲಾಲ್‍ಬಾಗ್‍ಗಳಲ್ಲಿ ಸಾವಿರಾರು ಬಾವುಲಿಗಳಿವೆ. ಇವು ಸಂಜೆ ವೇಳೆ ಆಹಾರ ಅರಸಿ ನಗರ ಪ್ರದೇಶಗಳಿಗೆ ಬರುತ್ತವೆ. ಮನೆಗಳ ಮುಂದೆ ಇರುವ ಮರಗಳಲ್ಲಿ ಚಿಗುರೆಲೆ, ಸಣ್ಣಪುಟ್ಟ ಹಣ್ಣುಗಳನ್ನು ತಿಂದು ಅಲ್ಲಲ್ಲೇ ಮರಗಳಲ್ಲಿ ನೇತಾಡುತ್ತಿರುತ್ತವೆ. ಇವುಗಳನ್ನು ಕಂಡ ಜನ ಪ್ರತಿನಿತ್ಯ ಬಿಬಿಎಂಪಿಗೆ ಕರೆ ಮಾಡಿ ದಯವಿಟ್ಟು ಬೇಗ ಬಾವುಲಿಗಳನ್ನು ಹಿಡಿದುಕೊಂಡು ಹೋಗಿ ನಮ್ಮ ಮನೆ ಮುಂದಿನ ಮರಗಳಲ್ಲಿ ಬೇಕಾದಷ್ಟು ಬಾವುಲಿಗಳಿವೆ. ನಮಗೆ ಭಯವಾಗುತ್ತದೆ ಎಂದು ಒತ್ತಾಯಿಸುತ್ತಿದ್ದಾರೆ.

bats--01

ವನ್ಯಜೀವಿ ವಿಭಾಗದವರು ಬಾವುಲಿಯಿಂದ ನಿಫಾ ಹರಡುವುದಿಲ್ಲ ಎಂದು ಪರಿಪರಿಯಾಗಿ ತಿಳುವಳಿಕೆ ಹೇಳಿದರೂ ಜನ ಮಾತ್ರ ನಂಬುತ್ತಿಲ್ಲ. ಹಾಗಾಗಿ ಪಾಲಿಕೆಯ ವನ್ಯಜೀವಿ ವಿಭಾಗದವರಿಗೆ ತಲೆನೋವಾಗಿಬಿಟ್ಟಿದೆ..! ಹಂದಿ ಹಿಡಿಯೋದಾ… ಬಾವುಲಿ ಹಿಡಿಯೋದಾ… ದೂರವಾಣಿ ಕರೆ ಸ್ವೀಕರಿಸುವುದಾ… ಎಂಬಂತಾಗಿದೆ.

Facebook Comments

Sri Raghav

Admin