ಪೆಟ್ರೋಲ್-ಡೀಸೆಲ್ ದರ ಇಳಿಸಲು ದೋಸ್ತಿ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar-and-Kumaraswamy

ಬೆಂಗಳೂರು,ಜೂ.2- ಇಂಧನಗಳ ಬೆಲೆ ಏರಿಕೆಯಿಂದ ದಿಕ್ಕೆಟ್ಟಿರುವ ರಾಜ್ಯದ ಜನತೆಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಿಂದ ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆಯೇ? ಸರ್ಕಾರದ ಮೂಲಗಳನ್ನು ನಂಬುವುದಾದರೆ ಶೀಘ್ರದಲ್ಲೇ ಜನಸಾಮಾನ್ಯರಿಗೆ ಸಂತಸದ ಸುದ್ದಿ ಸಿಗುವುದು ಖಚಿತ. ಇನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದಕ್ಕೆ ಮನಸ್ಸು ಮಾಡುವುದಷ್ಟೇ ಬಾಕಿ ಉಳಿದಿದೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಬೆಳವಣಿಗೆಗಳ ನಡುವೆಯೇ ನಿನ್ನೆಯಷ್ಟೇ ಅಡುಗೆ ಅನಿಲ(ಎಲ್‍ಪಿಜಿ) ದರವೂ ಏರಿಕೆಯಾಗಿತ್ತು. ಹೀಗೆ ಒಂದೇ ಸಮನೆ ತೈಲ ಬೆಲೆ ಏರಿಕೆಯಾಗುತ್ತಿರುವ ಪರಿಣಾಮ ಜನಸಾಮಾನ್ಯರು ತತ್ತರಿಸುವಂತಾಗಿದೆ. ಬೆಲೆ ಏರಿಕೆಯಿಂದ ಹೈರಾಣಾಗಿರುವ ರಾಜ್ಯದ ಜನತೆಗೆ ದೋಸ್ತಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಕಡಿತಗೊಳಿಸಲು ಗಂಭೀರ ಚಿಂತನೆ ನಡೆಸಿದೆ.

ಮೂರು ದಿನಗಳ ಹಿಂದಷ್ಟೇ ಕೇರಳ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್‍ಗೆ 1 ರೂ. ಕಡಿತಗೊಳಿಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು.ಈಗ ಇದೇ ಮಾದರಿಯನ್ನು ಕರ್ನಾಟಕ ಸರ್ಕಾರ ಅನುಸರಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಆದರೆ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ವಾಗ್ದಾನದಂತೆ ರೈತರು ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈಗಾಗಲೇ ರೈತ ಸಂಘಟನೆಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳೆ ಸಾಲ ಮನ್ನಾ ಕುರಿತಂತೆ 15 ದಿನಗಳ ಕಾಲಾವಕಾಶ ಕೋರಿದ್ದಾರೆ.   ಒಂದು ವೇಳೆ ರೈತರ ಸಾಲ ಮನ್ನಾವಾದರೆ ರಾಜ್ಯದ ಬೊಕ್ಕಸಕ್ಕೆ ಸುಮಾರು 53 ಸಾವಿರ ಕೋಟಿ ಹೊರೆಯಾಗುತ್ತದೆ. ಪರಿಣಾಮ ಸರ್ಕಾರದ ಕೆಲವು ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗುತ್ತದೆ. ಆದರೂ ವಿವಿಧ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಸಾಲಮನ್ನಾ ಮಾಡಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ಈಗ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್‍ಗೆ ಒಂದು ರೂ. ಕಡಿತಗೊಳಿಸಿದರೆ ಸರಿಸುಮಾರು 11 ಸಾವಿರ ಕೋಟಿಗೂ ಅಧಿಕ ಹಣ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ.  ಪ್ರಸ್ತುತ ರಾಜ್ಯದಲ್ಲಿ ಡೀಸೆಲ್ ದರ 70 ರೂ. 43 ಪೈಸೆ ಇದ್ದರೆ, ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 79 ರೂ. 61 ಪೈಸೆಯಷ್ಟಿದೆ.
ರಾಜ್ಯ ಸರ್ಕಾರವು ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮಾರಾಟ ತೆರಿಗೆಯಾಗಿ 11.28 ಪೈಸೆ ವಿಧಿಸಿದರೆ ಕೇಂದ್ರ ಸರ್ಕಾರವು 15.33 ಪೈಸೆಯನ್ನು ವಿಧಿಸುತ್ತದೆ.   ಮಾರುಕಟ್ಟೆಯಲ್ಲಿ ಡೀಸೆಲ್ ದರ 40.75 ಪೈಸೆ ಇದ್ದರೆ ರಾಜ್ಯ ತೆರಿಗೆ, ಕೇಂದ್ರ ತೆರಿಗೆ, ಸಾಗಾಣಿಕೆ ವೆಚ್ಚ 32 ಪೈಸೆ, ಡೀಲರ್ ಕಮೀಷನ್ 2.71 ಪೈಸೆ ಒಟ್ಟಾರೆ ಸೇರಿ 1 ಲೀಟರ್‍ಗೆ ಗ್ರಾಹಕ 70.39 ಪೈಸೆಯನ್ನು ನೀಡಬೇಕು.

ಆದಾಯವೆಷ್ಟು:
ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಮಾರಾಟ ತೆರಿಗೆ ವಿಧಿಸುವುದರಿಂದ ಪ್ರತಿ ವರ್ಷ ರಾಜ್ಯದ ಬೊಕ್ಕಸಕ್ಕೆ 10ರಿಂದ 11 ಸಾವಿರ ಕೋಟಿ ಆದಾಯ ಬರುತ್ತದೆ. 2017 -18ರಲ್ಲಿ ಸರ್ಕಾರಕ್ಕೆ 11,490 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಈ ಹಣವನ್ನು ಸರ್ಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಳಸಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.   ಒಂದು ವೇಳೆ ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಂಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಒಂದು ರೂ. ಮಾರಾಟ ತೆರಿಗೆಯನ್ನು ಕಡಿತಗೊಳಿಸಿದರೆ 11 ಸಾವಿರ ಕೋಟಿ ಖೋತಾ ಆಗಲಿದೆ.

ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಈ ದೃಢ ನಿರ್ಧಾರ ಕೈಗೊಂಡರೆ ಸರ್ಕಾರಕ್ಕೂ ಶ್ರೇಯಸ್ಸು ಬರುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾದಾಗ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಹರಿಯಾಣ, ಛತ್ತೀಸ್‍ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತಿತರ ಕಡೆ ತೆರಿಗೆ ಮಾರಾಟವನ್ನು ಕಡಿತಗೊಳಿಸಿ ಗ್ರಾಹಕರ ಹೊರಗೆ ಕಡಿವಾಣ ಹಾಕಲಾಗಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಇದೇ ಘೋಷಣೆ ಮಾಡಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಎಷ್ಟೇ ಏರಿಕೆಯಾದರೂ ಇಂಧನ ಬೆಲೆ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಆಶ್ವಾಸನೆ ನೀಡಲಾಗಿತ್ತು.ರೈತರ ಸಾಲಮನ್ನಾ ಹೊರೆಯಿಂದ ಈಗಾಗಲೇ ಕಂಗಾಲಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin