ಕಾಂಗ್ರೆಸ್’ಗೆ ಬಿಗ್ ಶಾಕ್..! ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

S-R-Patil-01

ಬೆಂಗಳೂರು, ಜೂ.3- ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅವರು ತಮ್ಮ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನ ಹಿರಿಯ ಮುಖಂಡರು, ಉತ್ತರ ಕರ್ನಾಟಕದ ಪ್ರಭಾವಿ ನಾಯಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರೂ ಆದ ಎಸ್.ಆರ್.ಪಾಟೀಲ್ ಅವರು ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ವಲಯದಲ್ಲಿ ಕಂಪನ ಮೂಡಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಉಂಟಾಗಿ ಕಾಂಗ್ರೆಸ್ ಪಕ್ಷ ಕೇವಲ 78 ಸ್ಥಾನಗಳನ್ನು ಪಡೆದು 38 ಸ್ಥಾನ ಪಡೆದ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದು ಮೈತ್ರಿ ಸರ್ಕಾರ ರಚನೆಯಾಗಿ ನೂತನ ಸಚಿವ ಸಂಪುಟ ಬುಧವಾರ ಅಸ್ತಿತ್ವಕ್ಕೆ ಬರುತ್ತಿರುವ ಸಂದರ್ಭದಲ್ಲೇ ಎಸ್.ಆರ್.ಪಾಟೀಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಎಸ್.ಆರ್.ಪಾಟೀಲ್ ಅವರು ಸಚಿವಾಕಾಂಕ್ಷಿಯಾಗಿದ್ದರು. ಅವರನ್ನು ಇತ್ತೀಚೆಗೆ ಕಡೆಗಣಿಸಲಾಗಿತ್ತು. ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಯಾವುದೇ ಸಭೆಗಳಲ್ಲಿ ಅವರಿಗೆ ಪ್ರಾತಿನಿಧ್ಯ ನೀಡಿರಲಿಲ್ಲ ಎಂದು ಕೇಳಿಬಂದಿದೆ.

ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಚುನಾವಣಾ ಫಲಿತಾಂಶ ಬಂದ ನಂತರ ನಡೆದ ಹಲವಾರು ಸಭೆಗಳಲ್ಲೂ ಕೂಡ ಎಸ್.ಆರ್.ಪಾಟೀಲ್ ಅವರು ಭಾಗವಹಿಸಿರಲಿಲ್ಲ. ಇತ್ತೀಚಿನ ಪಕ್ಷದ ಬೆಳವಣಿಗೆಗಳಿಂದ ಬೇಸತ್ತ ಅವರು ಮೇ 25ರಂದೇ ರಾಹುಲ್‍ಗಾಂಧಿ ಅವರಿಗೆ ಈ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್.ಪಾಟೀಲ್ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಯಾವುದೇ ಹುದ್ದೆಯನ್ನು ಕೇಳಿಕೊಂಡು ಯಾರ ಮನೆಗೂ ಹೋಗಿಲ್ಲ. ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ನೀಡಿ ಉತ್ತರ ಕರ್ನಾಟಕದಲ್ಲಿ ನನಗೆ ಜವಾಬ್ದಾರಿ ನೀಡಲಾಗಿತ್ತು. ನಿರೀಕ್ಷೆಯಂತೆ ಸ್ಥಾನಗಳು ಲಭಿಸಲಿಲ್ಲ. ಹಾಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ನನಗೆ ಯಾರ ಮೇಲೂ ಅಸಮಾಧಾನವಾಗಲಿ, ಬೇಸರವಾಗಲಿ ಇಲ್ಲ. ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಸಚಿವನಾಗಿದ್ದೆ ಹಾಗೂ ಸಭಾನಾಯಕನಾಗಿದ್ದೆ. ಆ ಸಂದರ್ಭದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನಾನು ರಾಜೀನಾಮೆ ನೀಡಿದಾಗ ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಪರವಾಗಿ ಭಾರೀ ಪ್ರಯತ್ನ ಮಾಡಿದರು. ಆದರೆ, ಆಗಲಿಲ್ಲ. ನನಗೇನು ಬೇಸರವಾಗಲಿಲ್ಲ. ಹೈಕಮಾಂಡ್ ನನಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಿತು. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ನಿರೀಕ್ಷೆಯಂತೆ ನಮ್ಮ ಪಕ್ಷಕ್ಕೆ ಫಲ ಸಿಗಲಿಲ್ಲ. ಇದರಿಂದ ಬೇಸತ್ತು ನಾನು ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಅಷ್ಟೆ. ಇದರಲ್ಲಿ ಯಾವುದೇ ಬೆದರಿಕೆಯ ತಂತ್ರವಿಲ್ಲ ಎಂದು ಹೇಳಿದರು. 2019ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶ ನಮಗಿದೆ. ಅದಕ್ಕಾಗಿ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಬಾದಾಮಿಯಲ್ಲಿ ಸಿದ್ದರಾಮಯ್ಯನವರನ್ನು ಗೆಲ್ಲಿಸಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಎಸ್.ಆರ್.ಪಾಟೀಲ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಸೋತಿದ್ದರೆ ರಾಜಕೀಯವಾಗಿ ಮೂಲೆಗುಂಪಾಗುತ್ತಿದ್ದರು. ಹಾಗಾಗಿ ಟಾರ್ಗೆಟ್ ಮಾಡಿ ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ. ಕಾಂಗ್ರೆಸ್‍ನ ಹಲವು ನಾಯಕರು ನನ್ನ ಬಗ್ಗೆ ಉದಾಸೀನ ಮಾಡಿದ್ದಾರೆ. ಪಕ್ಷ ಹಾಗೂ ನಾಯಕರ ನಡೆಯಿಂದ ಬೇಸತ್ತಿದ್ದೇನೆ. ಲಿಂಗಾಯತ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬೇಡವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin