ಶಿಕ್ಷಕನ ಎಡವಟ್ಟಿನಿಂದ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ..!

ಈ ಸುದ್ದಿಯನ್ನು ಶೇರ್ ಮಾಡಿ

Teacher--01
ಚಾಮರಾಜನಗರ, ಜೂ.3-ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡುತ್ತಿದ್ದಾರೆ ಎಂದು ಶಿಕ್ಷಕ ಕೈಯಲ್ಲಿದ್ದ ಕೋಲನ್ನು ವಿದ್ಯಾರ್ಥಿಗಳ ಮೇಲೆ ಎಸೆದ ಪರಿಣಾಮ ವಿದ್ಯಾರ್ಥಿಯೊಬ್ಬನ ಎಡಗಣ್ಣಿಗೆ ತಗುಲಿ ಆತ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ. ಪಟ್ಟಣದ ಸಿಆರ್‍ಬಿಪಿಎಚ್‍ಪಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗಿರಿ ಮಲ್ಲೇಶ್ ಎಂಬ ವಿದ್ಯಾರ್ಥಿಯು ತನ್ನ ಎಡಗಣ್ಣು ಕಳೆದುಕೊಂಡವ.

ಏಳನೇ ವ್ಯಾಸಂಗ ಮಾಡುತ್ತಿದ್ದ ಗಿರಿ ಮಲ್ಲೇಶ್ ತರಗತಿಯಲ್ಲಿ ಹೆಚ್ಚು ಗಲಾಟೆ ಮಾಡುತ್ತಿದ್ದ ಎಂದು ಆಕ್ರೋಶಗೊಂಡ ಶಿಕ್ಷಕ ಯೂಸಫ್ ತಮ್ಮ ಕೈಯಲ್ಲಿದ್ದ ಕೋಲನ್ನು ಹುಡುಗರ ಗುಂಪಿನ ಮೇಲೆ ಬೀಸಿದ್ದಾರೆ. ಈ ವೇಳೆ ಕೋಲು ಮಲ್ಲೇಶನ ಎಡಗಣ್ಣಿಗೆ ಬಿದ್ದಿದ್ದು, ಕೂಡಲೇ ಆತ ಕಣ್ಣು ಉರಿ ಎಂದು ಕಿರುಚಾಡಿದ್ದಾನೆ.
ನಂತರ ಶಿಕ್ಷಕ ಕಣ್ಣಿಗೆ ಡ್ರಾಪ್ ಹಾಕಿ ಈ ವಿಷಯವನ್ನು ಯಾರಿಗೂ ತಿಳಿಸಬೇಡ ಎಂದು ಮನೆಗೆ ಕಳುಹಿಸಿದ್ದಾರೆ. ಮನೆಗೆ ತೆರಳಿದ ನಂತರ ಮಲ್ಲೇಶ್ ಕಣ್ಣು ಉರಿಯಿಂದ ಬಳಲುತ್ತಿದ್ದಾಗ, ಪೋಷಕರು ಮೈಸೂರಿನ ಕೆ.ಆರ್.ಆಸ್ಪತ್ರೆ, ವಾಸನ್ ಐ ಕೇರ್ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ತೋರಿಸಿದ್ದಾರೆ.
ವಿದ್ಯಾರ್ಥಿಯನ್ನು ಕಣ್ಣು ಪರೀಕ್ಷಿಸಿದ ವೈದ್ಯರು ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದು, ದೃಷ್ಟಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ತಪ್ಪಿತಸ್ಥ ಎನ್ನಲಾದ ಶಿಕ್ಷಕ ಯೂಸಫ್ ವಿರುದ್ಧ ಪೋಷಕರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಶಿಕ್ಷಕನ ಮೇಲೆ ಕ್ರಮ ಜರುಗಿಸುವುದನ್ನು ಬಿಟ್ಟು ಶಾಲೆಗೆ ಹತ್ತು ದಿನಗಳ ಕಾಲ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳಿಗೆ ಏನೇ ಆದರೂ ಅದರ ಜವಾಬ್ದಾರಿ ಹೊರಬೇಕಿರುವುದು ಶಾಲಾ ಆಡಳಿತ ಮಂಡಳಿ. ಆದರೆ ತಪ್ಪಾಗಿದ್ದರೂ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪವೆಸಗಿದ್ದಾರೆ.

Facebook Comments

Sri Raghav

Admin