ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಜನ ಗಮನಿಸುತ್ತಿದ್ದಾರೆ : ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--02

ತುಮಕೂರು, ಜೂ.3-ಸಮ್ಮಿಶ್ರ ಸರ್ಕಾರದ ಬೆಳವಣಿಗೆ ಹಾಗೂ ವೈಫಲ್ಯಗಳನ್ನು ಜನ ಗಮನಿಸುತ್ತಿದ್ದಾರೆ. ನಾವೂ ಎಲ್ಲವನ್ನು ನೋಡುತ್ತಿದ್ದೇವೆ. ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸುಮ್ಮನಿದ್ದೇವೆ. ಚುನಾವಣೆ ಬಳಿಕ ಸರ್ಕಾರದ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಮ್ಮಿಶ್ರ ಸರ್ಕಾರ ಎಲ್ಲ ಕೆಲಸಗಳನ್ನು ಜನ ಗಮನಿಸಿದ್ದಾರೆ. ರಾಜ್ಯ ಸರ್ಕಾರದ ವಿಫಲತೆಯನ್ನು ಮನಗಂಡಿದ್ದಾರೆ. ನಾವು ಎಲ್ಲವನ್ನು ಅರಿತಿದ್ದರೂ ಚುನಾವಣೆ ಹಿನ್ನೆಲೆಯಲ್ಲಿ ಸುಮ್ಮನಿದ್ದೇವೆ. ಚುನಾವಣೆ ನಂತರ ಸರ್ಕಾರದ ವಿರುದ್ದ ಹೋರಾಟ ಮುಂದುವರೆಸುತ್ತೇವೆ ಎಂದರು. ಕೇಂದ್ರ ಸರ್ಕಾರದಿಂದ ಸಾಂಸ್ಥಿಕ ಸಂಸ್ಥೆಗಳ ದುರುಪಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ನಿರಾಕರಿಸಿದರು.

ನಗರದ ಸಿದ್ಧಿವಿನಾಯಕ ಸಮುದಾಯಭವನದ ಬಳಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಬಿಎಸ್‍ವೈ ಪ್ರಚಾರ ನಡೆಸಿದರು. ಸಭೆಯಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆಯಿಂದ ಆಗಮಿಸಿದ ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Facebook Comments

Sri Raghav

Admin