ತಳ್ಳುವ ಗಾಡಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಕುಮಾರಸ್ವಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-College

ಬೆಂಗಳೂರು, ಜೂ.4-ತಳ್ಳುವ ಗಾಡಿಯ ವ್ಯಾಪಾರಿಗಳು, ಫುಟ್‍ಪಾತ್ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಯಿಂದ ಮುಕ್ತಿಗೊಳಿಸಲು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಫುಟ್‍ಪಾತ್ ವ್ಯಾಪಾರಿಗಳು, ತಳ್ಳುವ ಗಾಡಿ ವ್ಯಾಪಾರಿಗಳು ಪ್ರತಿದಿನ ಮೀಟರ್ ಬಡ್ಡಿಯವರ ಮೊರೆ ಹೋಗುತ್ತಾರೆ. ಲಕ್ಷಾಂತರ ಜನ ಇದನ್ನು ಅವಲಂಬಿಸಿದ್ದಾರೆ. ಈ ಮೀಟರ್ ಬಡ್ಡಿಯಿಂದ ಅವರನ್ನು ಮುಕ್ತಿಗೊಳಿಸಬೇಕಿದೆ. ಹಾಗಾಗಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಲು ನಾವು ಪ್ರಣಾಳಿಕೆಯಲ್ಲಿ ಘೋಷಿಸಿದ್ದೆವು. ಅದರಂತೆ ಪ್ರತಿಯೊಬ್ಬ ಫುಟ್‍ಪಾತ್ ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳು ತಮ್ಮ ಆಧಾರ್‍ಕಾರ್ಡ್ ನೀಡಿ ಸಾಲ ಪಡೆದು, ಸಂಜೆ ಮರುಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ:
ಒಂದನೇ ತರಗತಿಯಿಂದ ಪದವಿವರೆಗೂ ಹೆಣ್ಣು ಮಕ್ಕಳಿಗೆಉಚಿತ ಶಿಕ್ಷಣ ನೀಡಬೇಕು. ಆಸ್ಪತ್ರೆಗಳಲ್ಲಿ ಸಾಕಷ್ಟು ಸುಧಾರಣೆ ತಂದು ಬಡವರ ಕೈಗೆಟುಕುವ ದರದಲ್ಲಿ ಯೋಜನೆ ತರಬೇಕಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ 6 ಸಾವಿರ ನೀಡುವ ಯೋಜನೆ ಸೇರಿದಂತೆ ಚುನಾವಣಾ ಪೂರ್ವದಲ್ಲಿ ನೀಡಿರುವ ಹಲವು ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ 23 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿದೆ. ಖಾಸಗಿ ಶಾಲೆಗಳ ಸರಿಸಮನಾಗಿ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ನೀಡಬೇಕೆಂಬ ಉದ್ದೇಶವಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸರ್ಕಾರಿ ಶಾಲಾ ಮತ್ತು ಕಾಲೇಜುಗಳ ಮೂಲಸೌಲಭ್ಯಗಳ ಕೊರತೆ ನಿವಾರಣೆಗೆ ಒತ್ತು ನೀಡಲಾಗುವುದು, ಶಿಕ್ಷಣ ಸಂಸ್ಥೆಗಳ ಕಟ್ಟಡ ಕಟ್ಟುವ ಆಸಕ್ತಿ ಪ್ರಯೋಗಾಲಯ, ಶಿಕ್ಷಕರ ನೇಮಕಾತಿಯಲ್ಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿಯನ್ನು ಕಾನೂನಿನಿಂದ ತಡೆಯಲಾಗದು, ಆದರೆ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಿಗೆ ನೀಡಬೇಕಾಗಿದೆ ಎಂದರು.

ಆರ್‍ಟಿಇ ಅಡಿ ದಾಖಲಾದ ಮಕ್ಕಳ ಪೋಷಕರಿಂದಲೂ ವಂತಿಗೆ ಪಡೆದಿರುವ ಪ್ರಕರಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನಡೆಸುವುದು ಪ್ರವಾಹದ ವಿರುದ್ಧ ಈಜಿದಂತೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡಿ ಬೊಕ್ಕಸ ಖಾಲಿ ಮಾಡುವುದಿಲ್ಲ. ರೈತರು ಸೇರಿದಂತೆ ಎಲ್ಲರ ರಕ್ಷಣೆ ಸರ್ಕಾರದ ಮೊದಲ ಆದ್ಯತೆ. ಸರ್ಕಾರದ ನ್ಯೂನ್ಯತೆ ಲೋಪದೋಷ ಸರಿಪಡಿಸಿ ಮುನ್ನಡೆಸುವುದು ಗೊತ್ತಿದೆ. ರಾಜಕೀಯ ಮಾಡುವುದೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಬಿಡಿಎಯಿಂದ 20 ಹೊಸ ಕಾರುಗಳ ಖರೀದಿಗೆ ತಡೆಯೊಡ್ಡಲಾಗಿದೆ. ಸರ್ಕಾರಿ ಕಚೇರಿ ನಿವಾಸದ ನವೀಕರಣ ಕಾರ್ಯ ನಿಲ್ಲಿಸಲಾಗಿದೆ. ಅನಿವಾರ್ಯವಾದರೆ 5 ಲಕ್ಷದ ಮಿತಿಯೊಳಗೆ ನವೀಕರಿಸಲು ಸೂಚಿಸಲಾಗಿದೆ. ಸರ್ಕಾರದ ಪ್ರತಿ ಪೈಸೆಯೂ ಸದ್ಬಳಕೆಯಾಗಬೇಕು, ದುಂದುವೆಚ್ಚ ವಾಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ವಿಧಾನಸಭೆ ಮತ್ತು ಪರಿಷತ್ತಿನ ಸಚಿವಾಲಯಗಳಿಂದ 20 ಹೊಸ ಕಾರುಗಳನ್ನು ಶಾಸಕರಿಗಾಗಿ ಖರೀದಿಸಲಾಗಿದೆ. ಆದರೂ ಅದು ತಮ್ಮ ಅವಧಿಯಲ್ಲಿ ಖರೀದಿಸಿದ್ದಲ್ಲ ಎಂದರು. ಕೌಶಲ್ಯ ವಿವಿ ಪ್ರಾರಂಭಿಸುವ ಗುರಿಯಿದ್ದು, 50 ಲಕ್ಷ ಯುವ ಜನರಿಗೆ ಉದ್ಯೋಗ ಒದಗಿಸುವ ಯೋಜನೆ ರೂಪಿಸಲಾಗುವುದು ಎಂದರು. ಕೇವಲ 3 ದಿನ ಮುಖ್ಯಮಂತ್ರಿಯಾಗಿದ್ದವರು, ಇಳಕಲ್‍ಗೆ ಪ್ರಯಾಣ ಮಾಡೋ ಹೆಲಿಕಾಪ್ಟರ್ ವೆಚ್ಚ 13 ಲಕ್ಷ ರೂ. ಮರುಪಾವತಿಗೆ ಕಡತ ಬಂದಿತ್ತು. ಹೆಲಿಕಾಪ್ಟರ್ ಬಾಡಿಗೆಗೆ ಪಡೆದರೂ 5 ಲಕ್ಷ ರೂ. ಇಳಕಲ್‍ಗೆ ಹೋಗಿ-ಬರಲು ಸಾಕಾಗುತ್ತಿತ್ತು ಎಂದರು.

ತಾವು ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಧಾನಿ ಭೇಟಿಗಾಗಿ ಹೋಗಿ ಬಂದಿದ್ದರೆ 40 ಲಕ್ಷ ವೆಚ್ಚವಾಗುತ್ತಿತ್ತು. ಸಾಮಾನ್ಯ ವಿಮಾನದಲ್ಲಿ ಹೋಗಿ ಬಂದಿದ್ದರಿಂದ 75 ಸಾವಿರದಲ್ಲೇ ಮುಗಿಯಿತು. ಹೀಗಾಗಿ ವಿಶೇಷ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ರೀತಿ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಸೋರಿಕೆ ತಡೆಗಟ್ಟಿ ಬೊಕ್ಕಸಕ್ಕೆ ಹಾನಿಯಾಗದಂತೆ ರೈತರನ್ನು, ಜನರನ್ನು ಉಳಿಸುವ ಕೆಲಸ ಮಾಡುವುದಾಗಿ ಹೇಳಿದರು.

Facebook Comments

Sri Raghav

Admin