ಮೊದಲ ಬಾರಿಗೆ ಸಾರ್ವಜನಿಕರಿಗೆ ದರ್ಶನ ನೀಡಿದ ಅಪರೂಪದ ‘ಆರ್ಡ್‍ವಾರ್ಕ್’ ಪ್ರಾಣಿ..!

ಈ ಸುದ್ದಿಯನ್ನು ಶೇರ್ ಮಾಡಿ

ds
ಈ ಜೀವಜಗತ್ತೇ ವಿಸ್ಮಯ. ಸಸ್ತನಿಗಳ ಲೋಕದಲ್ಲಿ ಅಪರೂಪದ ಪ್ರಾಣಿಗಳಿವೆ. ಅವುಗಳಲ್ಲಿ ಆರ್ಡ್‍ವಾರ್ಕ್ ಕೂಡ ಒಂದು. ಜೆಕ್ ಗಣರಾಜ್ಯದ ಪ್ರಾಗ್ ನಗರದ ಮೃಗಾಲಯದಲ್ಲಿ ಜನಿಸಿದ ಮರಿ ಈಗ ಸಾರ್ವಜನಿಕರಿಗೆ ದರ್ಶನ ನೀಡುತ್ತಿದೆ. ಹೊಸ ಅತಿಥಿಯ ಆಗಮನದಿಂದ ಪ್ರಾಣಿಪ್ರಿಯರು ಪುಳಕಗೊಂಡಿದ್ದಾರೆ.
ಪ್ರಾಗ್ ಮೃಗಾಲಯಕ್ಕೆ ಆಗಮಿಸಿರುವ ಹೊಸ ಅತಿಥಿಯನ್ನು ನೋಡಲು ಪ್ರೇಕ್ಷಕರು ತಂಡೋಪತಂಡವಾಗಿ ಬರುತ್ತಿದ್ದಾರೆ. ಮೂರು ವಾರಗಳ ಆರ್ಡ್‍ವಾರ್ಕ್ ಸಸ್ತನಿ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ದರ್ಶನ ನೀಡುತ್ತಿದೆ. ಕ್ವಿಡಾ ಎಂಬ ಹೆಣ್ಣು ಆರ್ಡ್‍ವಾರ್ಕ್ ಈ ಮರಿಗೆ ಜನ್ಮ ನೀಡಿದೆ. ಬೆಳಗ್ಗೆ ಎರಡು ಗಂಟೆ ಹಾಗೂ ಅಪರಾಹ್ನ ಎರಡು ಗಂಟೆಗಳ ಕಾಲ ಈ ಮರಿಯನ್ನು ಪುಟ್ಟ ಕಿಟಕಿ ಮೂಲಕ ನೋಡಲು ಪ್ರಾಣಿ ಪ್ರಿಯರಿಗೆ ಅವಕಾಶ ನೀಡಲಾಗಿದೆ.

ds-1

ಈ ಮುದ್ದು ಮರಿ ಈಗ ನಾಲ್ಕು ಕಿಲೋಗ್ರಾಂ ತೂಕವಿದೆ. ಆದರೆ ಇದು ಗಂಡೋ ಅಥವಾ ಹೆಣ್ಣೊ ಎಂಬುದು ಇನ್ನೂ ಪತ್ತೆಯಾಗಿಲ್ಲ. ಡಿಎನ್‍ಎ ವಿಶ್ಲೇಷಣೆ ನಂತರ ಇದು ತಿಳಿದುಬರಲಿದೆ. ಈ ಮರಿ ಈಗ ತಾಯಿ ಹಾಲು ಸೇವಿಸುತ್ತಿದೆ. ನಂತರ ಮಾಂಸ, ಕ್ಯಾರೆಟ್ ಇತರ ತರಕಾರಿಗಳಿಂದ ತಯಾರಿಸಿದ ಪೇಸ್ಟ್‍ನ್ನು ಆಹಾರವಾಗಿ ನೀಡಲಾಗುವುದು ಎಂದು ಮೃಗಾಲಯದ ವಕ್ತಾರೆ ಲೆಂಕಾ ಪ್ಯಾಸ್ಟೋಚಕೊವಾ ತಿಳಿಸಿದ್ದಾರೆ.  ಮರಿ ಆರೋಗ್ಯವಾಗಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಇದರ ತಂದೆ ಡ್ರಾಕೋದಿಂದ ತಾಯಿ ಮತ್ತು ಮರಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.  ಇದು ತಾಯಿ ಕ್ವಿಡಾ ಮತ್ತು ತಂದೆ ಡ್ರಾಕೋಗೆ ಜನಿಸಿದ ಮೂರನೇ ಮರಿ. ಮೊದಲ ಎರಡು ಮರಿಗಳು 2015 ಮತ್ತು 2016ರಲ್ಲಿ ಜನಿಸಿದ್ದವು. ಅವುಗಳು ಈಗ ಡೆನ್ಮಾರ್ಕ್ ಮತ್ತು ಜೆಕ್ ಸಿಟಿಯ ಮೃಗಾಲಯದಲ್ಲಿವೆ.

Facebook Comments

Sri Raghav

Admin