ಮೋದಿ ಮಹತ್ವಾಕಾಂಕ್ಷೆಯ ಜನೌಷಧಿ ಕೇಂದ್ರದಲ್ಲಿ 400 ಕೋಟಿಗೂ ಅಧಿಕ ವಹಿವಾಟು

ಈ ಸುದ್ದಿಯನ್ನು ಶೇರ್ ಮಾಡಿ

ModiMedicals
ಬೆಂಗಳೂರು, ಜೂ.5- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಜನೌಷಧಿ ಕೇಂದ್ರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 400 ಕೋಟಿಗೂ ಅಧಿಕ ವಹಿವಾಟು ನಡೆಸಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಅನಂತ್‍ಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನೌಷಧಿ ಮಳಿಗೆಗಳ ಆರಂಭಕ್ಕೆ ಉತ್ತೇಜನ ನೀಡಲಾಯಿತು. ಸಾಮಾನ್ಯ ಜನರಿಗೂ ಉತ್ತಮ ಗುಣಮಟ್ಟದ ಔಷಧಿ ಸಿಗಬೇಕೆಂಬ ಉದ್ದೇಶಕ್ಕಾಗಿ ಆರಂಭಿಸಿದ ಈ ಯೋಜನೆ ಇಂದು 400 ಕೋಟಿ ವಹಿವಾಟು ನಡೆಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದೇಶಾದ್ಯಂತ 3,603 ಜನೌಷಧಿ ಕೇಂದ್ರಗಳು ವಹಿವಾಟು ನಡೆಸುತ್ತಿವೆ. ಸುಮಾರು 1.13 ಲಕ್ಷ ಟನ್ ಬ್ರಾಂಡೆಡ್ ಕಂಪೆನಿಯ ನ್ಯಾಪ್‍ಕಿನ್‍ಗಳು ಬಳಕೆಯಾಗುತ್ತಿವೆ. ಒಟ್ಟಾರೆ 12.30 ಬಿಲಿಯನ್ ನ್ಯಾಪ್‍ಕಿನ್‍ಗಳು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಹಿಂದೆ ಬ್ರಾಂಡೆಡ್ ಕಂಪನಿಯ ನ್ಯಾಪ್‍ಕಿನ್‍ಗಳನ್ನು ಬಳಕೆ ಮಾಡಿದರೆ ಅವುಗಳನ್ನು ಮಣ್ಣಿನಲ್ಲಿ ಹೂತರೆ ಅವುಗಳು 500 ವರ್ಷ ಕಳೆದರೂ ಕೊಳೆತು ಹೋಗುತ್ತಿರಲಿಲ್ಲ. ಈಗ ಸುಧಾರಿತ ತಂತ್ರಜ್ಞಾನ ಬಳಸಿ ತಯಾರಿಸಿರುವ ಪರಿಣಾಮ 3 ರಿಂದ 6 ತಿಂಗಳೊಳಗೆ ನ್ಯಾಪ್‍ಕಿನ್‍ಗಳು ಕೊಳೆತು ಹೋಗುತ್ತವೆ. ಇವು ಪರಿಸರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯ ಜನರು, ಗಾರ್ಮೆಂಟ್ಸ್ ನೌಕರರು, ಸಫಾಯಿ ಕರ್ಮಚಾರಿಗಳು, ಬಡತನ ರೇಖೆಗಿಂತ ಕೆಳಗಿರುವವರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆರೋಗ್ಯ, ಪರಿಸರಕ್ಕೆ ಹಾನಿಯಾಗದಂತೆ ಆಕ್ಸೋ ಡಿ ಗ್ರೇಡ್ ಟೆಕ್ನಾಲಜಿಯಿಂದ ನ್ಯಾಪ್‍ಕಿನ್‍ಗಳನ್ನು ತಯಾರಿಸಲಾಗಿದೆ. ಇವುಗಳಿಗೆ ಆಮ್ಲಜನಕ ಸೇರ್ಪಡೆ ಮಾಡುವುದರಿಂದ ಮಣ್ಣಿನಲ್ಲಿ ಬೇಗ ಕರಗಿ ಹೋಗುತ್ತವೆ. ಪರಿಸರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಇದು ಜನಸ್ನೇಹಿಯಾಗಿದೆ ಎಂದರು.

ಬ್ರಾಂಡೆಡ್ ಕಂಪೆನಿಗಳು ಒಂದು ಪ್ಯಾಕೆಟ್‍ಗೆ 38 ರೂ. ದರದಲ್ಲಿ ಮಾರಾಟ ಮಾಡುತ್ತವೆ. ಇವುಗಳಲ್ಲಿ ಕೇವಲ 4 ನ್ಯಾಪ್‍ಕಿನ್‍ಗಳಿರುತ್ತವೆ. ಇದನ್ನು ಶ್ರೀಮಂತರು ಖರೀದಿಸಬಹುದೇ ಹೊರತು ಜನಸಾಮಾನ್ಯರು ಖರೀದಿಸಲು ಸಾಧ್ಯವಿಲ್ಲ. ಆದರೆ ಜನೌಷಧಿ ಕೇಂದ್ರದಲ್ಲಿ ಅದೇ ಬ್ರಾಂಡೆಡ್ ನ್ಯಾಪ್‍ಕಿನ್‍ಗಳು ಕೇವಲ 10 ರೂ.ಗಳಿಗೆ ಸಿಗಲಿವೆ. ಇದರಿಂದ ಮಹಿಳೆಯರಿಗೆ 28 ರೂ. ಉಳಿತಾಯವಾಗಲಿದೆ. ಪರಿಸರ ಸ್ನೇಹಿಯಾದ ಈ ನ್ಯಾಪ್‍ಕಿನ್‍ಗಳನ್ನು ಬಳಸಿ ಎಂದು ಮನವಿ ಮಾಡಿದರು.

ದೇಶದಲ್ಲಿ ಇಂದು ಕೇವಲ ಶೇ.42ರಷ್ಟು ಮಹಿಳೆಯರು ಮಾತ್ರ ನ್ಯಾಪ್‍ಕಿನ್‍ಗಳನ್ನು ಬಳಕೆ ಮಾಡುತ್ತಿದ್ದಾರೆ. ಉಳಿದ ಶೇ.58ರಷ್ಟು ಮಹಿಳೆಯರು ನ್ಯಾಪ್‍ಕಿನ್ ಬಳಸುವುದಿಲ್ಲ. ಅವರಿಗೆ ಅದರ ಅರಿವಿಲ್ಲ. ನಮ್ಮ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಗ್ರಾಮೀಣ ಭಾಗಗಳು, ಆದಿವಾಸಿಗಳು ವಾಸಿಸುವ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಜನೌಷಧಿ ಕೇಂದ್ರದ ಮೂಲಕ ನಾವು ದೇಶದಲ್ಲಿ ಆರೋಗ್ಯವಿಮೆಯನ್ನು ಜಾರಿ ಮಾಡಿದ್ದೇವೆ. ಇದರಿಂದ 50 ಕೋಟಿ ಕುಟುಂಬದವರಿಗೆ ಇದರ ಲಾಭವಾಗಿದೆ. ಈ ಯೋಜನೆಯಡಿ ಪ್ರತಿಯೊಬ್ಬರಿಗೂ 5 ಲಕ್ಷ ಆರೋಗ್ಯವಿಮೆಯನ್ನು ಒದಗಿಸುತ್ತಿದ್ದೇವೆ. ಸಾರ್ವಜನಿಕರು ಇನ್ನು ಹೆಚ್ಚಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಅನಂತ್‍ಕುಮಾರ್ ಮನವಿ ಮಾಡಿದರು.

ಜನೌಷಧಿ ಕೇಂದ್ರದ ಮುಖ್ಯ ನಿರ್ವಹಣಾಧಿಕಾರಿ (ಸಿಇಒ) ಸಚಿನ್‍ಸಿಂಗ್ ಮಾತನಾಡಿ, ಕರ್ನಾಟಕದಲ್ಲಿ ನಾವು 1500 ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಿದ್ದೇವೆ. ಇಂದು ಇದು 35 ಕೋಟಿಗೂ ಅzsಧಿಕ ವಾರ್ಷಿಕ ವಹಿವಾಟು ನಡೆಸುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ 500 ಕೋಟಿ ವಹಿವಾಟನ್ನು ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್ ಮತ್ತಿತರರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin