ಬೆಂಗಳೂರು ಪದವೀಧರ ಕ್ಷೇತ್ರದದಲ್ಲಿ ಬಿಜೆಪಿ ಭದ್ರಕೋಟೆ ಬೇಧಿಸಲು ಕಾಂಗ್ರೆಸ್-ಜೆಡಿಎಸ್ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Bangalore--01

ಬೆಂಗಳೂರು, ಜೂ.6-ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ರಣರಂಗ ಸಜ್ಜಾಗಿದ್ದು, ಪ್ರಮುಖ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳು ಗೆಲ್ಲಲು ಹರಸಾಹಸಪಡುತ್ತಿದ್ದಾರೆ. ವಿಧಾನಸೌಧದಲ್ಲಿ ಮೈತ್ರಿ ಹೊರಗಡೆ ಕುಸ್ತಿ ಎಂಬಂತೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡಿದ್ದರೂ ಈ ಚುನಾವಣೆಯಲ್ಲಿ ಪರಸ್ಪರ ಎದುರಾಳಿಳಾಗಿವೆ. ಕಾಂಗ್ರೆಸ್‍ನಿಂದ ರಾಮೋಜಿ ಗೌಡ, ಜೆಡಿಎಸ್‍ನಿಂದ ಅಚ್ಚೇಗೌಡ ಶಿವಣ್ಣ ಹಾಗೂ ಹಾಗೂ ಬಿಜೆಪಿಯಿಂದ ಅ.ದೇವೇಗೌಡ ಕಣಕ್ಕಿಳಿದಿದ್ದಾರೆ.

ಈ ಮೊದಲು ಕಳೆದ ಮೂರು ದಶಕಗಳಿಂದ ಬೆಂಗಳೂರು ಪದವಿಧರ ಕ್ಷೇತ್ರದಿಂದ ಸತತ 5 ಬಾರಿ ಬಿಜೆಪಿಯ ಹಿರಿಯ ನಾಯಕ ರಾಮಚಂದ್ರಗೌಡ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.  ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ರಾಮಚಂದ್ರಗೌಡ ಬದಲಿಗೆ ಜೆಡಿಎಸ್‍ನಿಂದ ವಲಸೆ ಬಂದ ಆ.ದೇವೇಗೌಡರಿಗೆ ಮಣೆ ಹಾಕಿದೆ.

ಬಿಜೆಪಿಯ ಭದ್ರಕೋಟೆಯನ್ನು ಬೇಧಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಜ್ಜಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಜಿಲ್ಲೆಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸೌಧ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಿಶ್ರ ಫಲಿತಾಂಶ ಬಂದಿದೆ.
ಇದು ಚುನಾವಣೆ ಮೇಲೆ ಪರಿಣಾಮ ಬೀರಿದರೆ ಅಚ್ಚರಿ ಇಲ್ಲ. ಕಳೆದ 15 ದಿನಗಳಿಂದ ಅಭ್ಯರ್ಥಿಗಳು ಮತದಾರನ ಮನೆ ಬಾಗಿಲು ತಟ್ಟುತ್ತಿದ್ದು , ಈ ಬಾರಿ ಗೆದ್ದರೆ ಪದವೀಧರರ ಸಮಸ್ಯೆಗಳನ್ನು ಪರಿಹರಿಸುವ ವಾಗ್ದಾನ ನೀಡುತ್ತಿದ್ದಾರೆ.

ಹೇಗಿದೆ ಕ್ಷೇತ್ರ:
ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಪದವೀಧರ ಕ್ಷೇತ್ರದಲ್ಲಿ 65,223 ಮತದಾರರಿದ್ದಾರೆ. 36 ವಿಧಾನಸಭಾ ಕ್ಷೇತ್ರಗಳು ಹಾಗೂ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯಿದೆ. ಬಿಜೆಪಿಯ ಕೋಟೆಯನ್ನು ಕೆಡವಲು ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್‍ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದಲೇ ತಯಾರಿ ನಡೆಸಿವೆ.  ಸತತ 30 ವರ್ಷಗಳ ಕಾಲ ಈ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದ ಬಿಜೆಪಿ 2ನೇ ಹಂತದ ನಾಯಕನನ್ನು ಬೆಳೆಸದ ಪರಿಣಾಮ ಅನ್ಯ ಪಕ್ಷದಿಂದ ಅಭ್ಯರ್ಥಿಯನ್ನು ಕರೆತರುವಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿತು.

ಈ ಮೊದಲು ಈ ಕ್ಷೇತ್ರದಿಂದ ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದ್ದರಿಂದಲೇ ಅವರು ಕ್ಷೇತ್ರಾದಾದ್ಯಂತ ನೋಂದಣಿ ಕಾರ್ಯದಲ್ಲಿ ತೊಡಗಿದ್ದರು. ಕೊನೆ ಕ್ಷಣದಲ್ಲಿ ಬಿಜೆಪಿ ಆ.ದೇವೇಗೌಡರಿಗೆ ಮಣೆ ಹಾಕಿದ್ದರಿಂದ ಸಂಪೂರ್ಣ ರಾಜಕೀಯ ಚಿತ್ರಣವೇ ಬದಲಾಯಿತು. ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿರುವುದು ಅಭ್ಯರ್ಥಿಗೆ ವರವಾಗಿದೆ.

ಕೈ ಬಲ:
ಇನ್ನು ಕಾಂಗ್ರೆಸ್‍ನಿಂದ ಸ್ಪರ್ಧಿಸಿರುವ ರಾಮೋಜಿ ಗೌಡಗೆ ಕಳೆದ ಬಾರಿ ಸೋಲಿನ ಅನುಕಂಪ ಮತದಾರರ ಕೈ ಹಿಡಿಯಬಹುದು. ಕಳೆದ ಒಂದು ವರ್ಷದಿಂದ ಕ್ಷೇತ್ರಾದ್ಯಂತ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿರುವ ಅವರಿಗೆ ಕಾಂಗ್ರೆಸ್ ಸರ್ಕಾರ ಇರುವುದು ಶ್ರೀರಕ್ಷೆಯಾಗಬಹುದು. ಪ್ರಾಥಮಿಕ,ಪ್ರೌಢ ಶಾಲಾ ಶಿಕ್ಷಕರ ಸಂಘ,ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ, ಪದವಿ ಕಾಲೇಜು ಉಪನ್ಯಾಸಕರ ಸಂಘ ಬೆಂಬಲ ನೀಡಿವೆ. ಜತೆಗೆ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನೀಲಕಂಠಗೌಡ ಮತ್ತು ಯುವ ಮುಖಂಡ ಸಂಜೀತ್ ರಾಕೇಶ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಪದವೀಧರರ ಸಭೆಗಳನ್ನು ನಡೆಸಿ ಮತಯಾಚಿಸಿದ್ದಾರೆ. ಸ್ವತಃ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಸಭೆ ನಡೆಸಿ ಎಲ್ಲ ಕೆಪಿಸಿಸಿ ಎಲ್ಲ ಘಟಕಗಳಿಗೆ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವಂತೆ ತಾಕೀತು ಮಾಡಿದ್ದಾರೆ. ಜೊತೆಗೆ ರಾಮೋಜಿಗೌಡರು ಕಾಂಗ್ರೆಸ್‍ನ ಬ್ಲಾಕ್ ಮಟ್ಟದ ಪದಾಧಿಕಾರಿಗಳು, ಎನ್‍ಎಸ್‍ಯುಐ ಪದಾಧಿಕಾರಿಗಲು ಹಾಗೂ ಕಾರ್ಯಕರ್ತರು ಯುವಕರ ದೊಡ್ಡ ಪಡೆಯನ್ನೇ ¨ಬ್ನಿಗೆ ಕಟ್ಟಿಕೊಂಡು ಮತ ಯಾಚನೆ ಮಾಡುತ್ತಿದ್ದಾರೆ. ಈ ಬಾರಿ ಗೆಲುವು ತಮ್ಮದೇ ಎಂಬ ಆತ್ಮವಿಶ್ವಾಸಲ್ಲಿದ್ದಾರೆ.

ಅಚ್ಚೇಗೌಡ ಶಿವಣ್ಣಗೆ ಜೆಡಿಎಸ್ ನಾಮಬಲ:
ಅ.ದೇವೇಗೌಡ ಬಿಜೆಪಿ ಸೇರ್ಪಡೆಯಾದ ಕಾರಣ ಎಲ್.ಆರ್.ಶಿವರಾಮೇಗೌಡರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ಮಂಡ್ಯದಿಂದ ಸ್ಪರ್ಧೆ ಬಯಸಿದ್ದರಿಂದ ಅಚ್ಚೇಗೌಡ ಶಿವಣ್ಣ ಅವರನ್ನು ಕಣಕ್ಕಿಳಿಸಲಾಯಿತು. ಅಲ್ಲದೆ, ಅಚ್ಚೇಗೌಡರಿಗೆ ಟಿಕೆಟ್ ನೀಡುವಂತೆ ಒಕ್ಕಲಿಗರ ಸಂಘ ಜೆಡಿಎಸ್ ಪರಮೋಚ್ಛ ನಾಯಕ ದೇವೇಗೌಡರ ಮೇಲೆ ಒತ್ತಡ ಕೂಡ ಹೇರಿತ್ತು. ನೀವು ಟಿಕೆಟ್ ನೀಡಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಒಕ್ಕಲಿಗರ ಸಂಘದ ಬಹುತೇಕ ನಿರ್ದೇಶಕರು ದೇವೇಗೌಡರಿಗೆ ಅಭಯ ನೀಡಿದ್ದರಿಂದ ಅಚ್ಚೇಗೌಡ ಶಿವಣ್ಣ ಅವರಿಗೆ ಟಿಕೆಟ್ ನೀಡಲು ಗೌಡರು ಸಮ್ಮತಿಸಿದ್ದರು.

ಅಭ್ಯರ್ಥಿಗಳು : 
ಬಿಜೆಪಿ -ಅ.ದೇವೇಗೌಡ
ಕಾಂಗ್ರೆಸ್-ರಾಮೋಜಿಗೌಡ
ಜೆಡಿಎಸ್- ಅಚ್ಚೇಗೌಡ ಶಿವಣ್ಣ
ಕ್ಷೇತ್ರವ್ಯಾಪ್ತಿ:
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ರಾಮನಗರ

ಒಟ್ಟು ಮತದಾರರು -65,223
ಮತದಾನದ ದಿನಾಂಕ- ಜೂ.8(ಶುಕ್ರವಾರ )

Facebook Comments

Sri Raghav

Admin