ಇವರೇ ನೋಡಿ ಇಂದು ಪ್ರಮಾಣ ವಚನ ಸ್ವೀಕರಿಸುವ ಮೈತ್ರಿ ಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

Ministers-01

ಬೆಂಗಳೂರು, ಜೂ.6-ಹಲವರ ವಿರೋಧ ಹಾಗೂ ಅಸಮಾಧಾನದ ನಡುವೆಯೇ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನಿಂದ 23 ಮಂದಿ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ವಿದ್ಯುಕ್ತವಾಗಿ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮಧ್ಯಾಹ್ನ 2 ಗಂಟೆ 12 ನಿಮಿಷಕ್ಕೆ ಸರಿಯಾಗಿ ಕನ್ಯಾ ಲಗ್ನದಲ್ಲಿ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರದ ಗೌಪ್ಯತೆ ಬೋಧಿಸಿದರು.  ಕಾಂಗ್ರೆಸ್‍ನಿಂದ 15 ಮಂದಿ ಹಾಗೂ ಜೆಡಿಎಸ್‍ನಿಂದ 8 ಮಂದಿ ಶಾಸಕರು ಇಂದು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂಪುಟದಲ್ಲಿ ಯಾವುದೇ ರೀತಿಯ ಭಿನ್ನಮತ, ಅಸಮಾಧಾನಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಉಭಯ ಪಕ್ಷಗಳು ಇನ್ನು ಕೆಲವು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಇಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯವಾಗಿ ಜಾತಿ, ಪ್ರಾದೇಶಿಕತೆ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ 2019ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಹಿರಿ-ಕಿರಿಯರನ್ನೊಳಗೊಂಡ ಸಮತೋಲನದ ಸಂಪುಟ ವಿಸ್ತರಣೆ ಮಾಡಿರುವುದು ವಿಶೇಷವಾಗಿದೆ. ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಪಕವಾಗಿ ಎದುರಿಸಲು ಹಿರಿಯರು ಹಾಗೂ ಕಿರಿಯರಿಗೂ ಕೂಡ ಮಣೆ ಹಾಕಲಾಗಿದೆ. ಮುಖ್ಯವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎರಡು ಪ್ರಮುಖ ಸಮುದಾಯಗಳಾದ ಲಿಂಗಾಯಿತ ಹಾಗೂ ಒಕ್ಕಲಿಗ ಜಾತಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.

ಕಳೆದ ರಾತ್ರಿಯಿಂದ ನಡೆದ ಸರ್ಕಸ್ ಬೆಳಗ್ಗೆ 11 ಗಂಟೆವರೆಗೂ ಮುಂದುವರೆದಿತ್ತು. ಎರಡು ಪಕ್ಷಗಳಿಂದ ಸಚಿವರ ಪಟ್ಟಿಗೆ ಅಂತಿಮ ಸ್ಪರ್ಶ ನೀಡಲು ಮುಖಂಡರು ಹರಸಾಹಸ ನಡೆಸಿದರು. ಅಂತಿಮವಾಗಿ ಕಾಂಗ್ರೆಸ್ ಹಾಗೂ ಎಐಸಿಸಿ ವತಿಯಿಂದ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವತಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಚಿವ ಸಂಪುಟ ಪಟ್ಟಿಗೆ ಅಂತಿಮ ಸ್ಪರ್ಶ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟರು.

ಅಚ್ಚರಿಯ ಬೆಳವಣಿಗೆ:
ಇಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಚ್ಚರಿ ಬೆಳವಣಿಗೆ ಎಂದರೆ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ ರಾಮಚಂದ್ರ ಪ್ರಮಾಣ ವಚನ ಸ್ವೀಕರಿಸಿದ್ದು. ಈಡಿಗ ಸಮುದಾಯದಿಂದ ಕೊನೆ ಕ್ಷಣದಲ್ಲಿ ಅವರಿಗೆ ಸಚಿವರಾಗುವ ಸೌಭಾಗ್ಯ ದಕ್ಕಿತು. ಈ ಮೊದಲು ಮಹಿಳಾ ಕೋಟಾದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಕೆಜಿಎಫ್‍ನ ಶಾಸಕಿ ಹಾಗೂ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್ , ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಕೇಳಿಬಂದಿತ್ತು. ಆದರೆ ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ನೀಡಬಾರದೆಂಬ ಹೈಕಮಾಂಡ್ ತೀರ್ಮಾನದಂತೆ ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

ಎಲ್ಲ ಜಿಲ್ಲೆಗಳಿಗೂ ಆದ್ಯತೆ:
ಇನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಿಗೂ ಪ್ರಾಧ್ಯಾನತೆ ಸಿಕ್ಕಿದೆ. ವಿಶೇಷವಾಗಿ ಮೈಸೂರು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಸಂಪುಟಕ್ಕೆ ಸೇರ್ಪಡೆಯಾದವರು

# ಕಾಂಗ್ರೆಸ್
1. ಡಿ.ಕೆ.ಶಿವಕುಮಾರ್ (ಕನಕಪುರ )
2. ಆರ್.ವಿ.ದೇಶಪಾಂಡೆ(ಹಳಿಯಾಳ )
3. ಕೆ.ಜೆ.ಜಾರ್ಜ್ (ಸರ್ವಜ್ಞನಗರ)
4. ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ)
5. ಯು.ಟಿ.ಖಾದರ್ (ಮಂಗಳೂರು )
6. ರಾಜಶೇಖರ್ ಪಾಟೀಲ್(ಹುಮ್ನಾಬಾದ್)
7. ಶಿವಶಂಕರರೆಡ್ಡಿ (ಗೌರಿಬಿದನೂರು)
8. ಎಸ್.ಶಂಕರ್(ಪಕ್ಷೇತರ)(ರಾಣೆಬೆನ್ನೂರು)
9. ಪುಟ್ಟರಂಗ ಶೆಟ್ಟಿ (ಚಾಮರಾಜನಗರ)
10. ಎಚ್.ಕೆ.ಪಾಟೀಲ್(ಗದಗ)
11. ಪ್ರಿಯಾಂಕ ಖರ್ಗೆ(ಚಿತ್ತಾಪುರ)
12. ಜಮೀರ್ ಅಹಮ್ಮದ್(ಚಾಮರಾಜಪೇಟೆ)
13. ಶಿವಾನಂದ ಪಾಟೀಲ್ (ಬಸವನಬಾಗೇವಾಡಿ)
14. ಕೃಷ್ಣಭೈರೇಗೌಡ( ಬ್ಯಾಟರಾಯನಪುರ)
15. ಜಯಮಾಲಾ(ಮೇಲ್ಮನೆ)
# ಜೆಡಿಎಸ್
1. ಎಚ್.ಡಿ.ರೇವಣ್ಣ (ಹೊಳೆ ನರಸೀಪುರ)
2. ಜಿ.ಟಿ.ದೇವೇಗೌಡ (ವರುಣಾ)
3. ಸಾ.ರಾ.ಮಹೇಶ್(ಕೆ.ಆರ್.ನಗರ)
4. ಸಿ.ಎಸ್.ಪುಟ್ಟರಾಜು (ಮೇಲುಕೋಟೆ)
5. ಎಚ್.ಕೆ.ಕುಮಾರಸ್ವಾಮಿ( ಸಕಲೇಶಪುರ)
6. ಬಂಡೆಪ್ಪ ಕಾಶಂಪೂರ್(ಬೀದರ್ ದಕ್ಷಿಣ)
7. ವೆಂಕಟರಾವ್ ನಾಡಗೌಡ( ಸಿಂಧÀನೂರು)
8. ಎನ್.ಮಹೇಶ್ (ಕೊಳ್ಳೇಗಾಲ)

Facebook Comments

Sri Raghav

Admin