ಸಚಿವ ಸಂಪುಟ ರಚನೆ ಬೆನ್ನಲ್ಲೇ ಕಾಂಗ್ರೆಸ್- ಜೆಡಿಎಸ್ ನಲ್ಲಿ ಭುಗಿಲೆದ್ದ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

MTB
ಬೆಂಗಳೂರು, ಜೂ.6- ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ತನ್ವೀರ್ ಸೇಠ್, ಎಂ.ಬಿ.ಪಾಟೀಲ್ ಮುಂತಾದ ಸಚಿವ ಸ್ಥಾನ ವಂಚಿತರು ಅಸಮಾಧಾನಗೊಂಡಿದ್ದಾರೆ. ಇದಲ್ಲದೆ, ಸಚಿವಾಕಾಂಕ್ಷಿಗಳಾಗಿದ್ದ ಆನಂದ್‍ಸಿಂಗ್, ರಹೀಂಖಾನ್, ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಯತೀಂದ್ರ ಮುಂತಾದವರು ಕೂಡ ನಿರಾಸೆಗೊಳಗಾಗಿದ್ದಾರೆ. ಜೇವರ್ಗಿಯಲ್ಲಿ ಅಜಯ್‍ಸಿಂಗ್ ಬೆಂಬಲಿಗರು ಟಯರ್
ಗಳಿಗೆ ಬೆಂಕಿ ಹಚ್ಚಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಧರಂಸಿಂಗ್ ಪುತ್ರ ಅಜಯ್‍ಸಿಂಗ್ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು.

ಆದರೆ, ಅಜಯ್‍ಸಿಂಗ್ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅವರ ಬೆಂಬಲಿಗರು ಜೇವರ್ಗಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅದೇ ರೀತಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಕೂಡ ಪ್ರತಿಭಟನೆ ನಡೆಸಿ ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂ.ಬಿ.ಪಾಟೀಲ್‍ಗೆ ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವಾಕಾಂಕ್ಷಿಯಾಗಿದ್ದ ಎಂ.ಬಿ.ಪಾಟೀಲ್ ಕೂಡ ತೀವ್ರ ಅಸಮಾಧಾನಗೊಂಡಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದು, ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಹಿರಿಯ ನಾಯಕರ ಜತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಮಲಿಂಗಾರೆಡ್ಡಿ, ತನ್ವೀರ್‍ಸೇಠ್, ರೋಷನ್‍ಬೇಗ್ ಸೇರಿದಂತೆ ಅನೇಕ ಮುಖಂಡರು ಕೂಡ ಸಂಪುಟದಲ್ಲಿ ಸೇರ್ಪಡೆಯಾಗದಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಏಳು ಬಾರಿ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಹೇಳಲಾಗಿದೆ. ಹಾಗಾಗಿ ಅವರು ಕೂಡ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಉಮೇಶ್ ಜಾದವ್, ಎಂ.ಟಿ.ಬಿ.ನಾಗರಾಜ್, ಬಿ.ಸಿ.ಪಾಟೀಲ್, ನಾಗೆಂದ್ರ, ಟಿ.ರಘುಮೂರ್ತಿ, ಆರ್.ನರೇಂದ್ರ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್‍ನಲ್ಲಿ ಭಿನ್ನಮತದ ಹೊಗೆಯಾಡತೊಡಗಿದೆ. ಯಾವಾಗ ಬೆಂಕಿಯ ಜ್ವಾಲೆ ಸಿಡಿಯುತ್ತದೋ ಎಂಬ ಆತಂಕ ವರಿಷ್ಠರಲ್ಲಿ ಕಾಡತೊಡಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಜಾತಿವಾರು ಆದ್ಯತೆಯನ್ನು ಪರಿಗಣಿಸಿ ಹಿರಿಯರು, ಕಿರಿಯರಿಗೆ ಆದ್ಯತೆ ನೀಡಿ ಸಂಪುಟಕ್ಕೆ ಸಚಿವರನ್ನು ನೇಮಕ ಮಾಡಲಾಗಿದೆ. ಆದರೆ, ಎಲ್ಲರನ್ನೂ ಸಮಾಧಾನಗೊಳಿಸಲು ಸಾಧ್ಯವಾಗಿಲ್ಲ. ಮೈತ್ರಿ ಸರ್ಕಾರವಿರುವುದರಿಂದ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ತ್ಯಾಗ ಮಾಡಬೇಕಾಗಿದೆ. ಹೀಗಾಗಿ ಹಿರಿಯರೊಂದಿಗೆ ಪಕ್ಷದ ಮುಖಂಡರು ಸಮಾಲೋಚನೆ ನಡೆಸಿ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೂ ಒಳಗೊಳಗೇ ಅಸಮಾಧಾನದ ಕುದಿ ಇದೆ. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪುತ್ರ ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸಲು ಲಾಬಿ ನಡೆಸಿದ್ದರಾದರೂ ಆ ಪ್ರಯತ್ನ ಕೈಗೂಡಿಲ್ಲ.

ಕೃಷ್ಣಭೈರೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸಿಕ್ಕಿರುವ ಸಚಿವ ಪದವಿ ಸೀಮಿತ ಅವಧಿಗೆ ಮಾತ್ರ. ಅಸಮಾಧಾನಗೊಂಡವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ಸಚಿವ ಸ್ಥಾನ ಸಿಕ್ಕವರು ಮತ್ತು ಅವರ ಬೆಂಬಲಿಗರು ಸಂಭ್ರಮ ವ್ಯಕ್ತಪಡಿಸಿದರೆ, ಸಚಿವ ಸ್ಥಾನ ವಂಚಿತರು, ಅವರ ಬೆಂಬಲಿಗರು ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ವರಿಷ್ಠರು ಬಂಡಾಯ ಶಮನ ಮಾಡುವ ಯತ್ನ ನಡೆಸಿದ್ದಾರೆ.

ಜೆಡಿಎಸ್‍ನಲ್ಲೂ ಅತೃಪ್ತಿ ತಾಂಡವ:
ಜೆಡಿಎಸ್ ಪಕ್ಷದಲ್ಲೂ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಶಾಸಕ ಎಂ.ಸಿ.ಮನಗೋಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ದೇವೇಗೌಡರ ನಿವಾಸದೆದುರು ಪ್ರತಿಭಟನೆ ನಡೆಸಿದರು. ಡಿ.ಸಿ.ತಮ್ಮಣ್ಣ ಬೆಂಬಲಿಗರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಮದ್ದೂರು ಪಟ್ಟಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಜೆಡಿಎಸ್ ಹಿರಿಯ ವರಿಷ್ಠರು ಬಂಡಾಯ ಶಮನ, ಅತೃಪ್ತರ ಮನವೊಲಿಕೆ ಯತ್ನ ನಡೆಸಿದರು.

Facebook Comments

Sri Raghav

Admin