ವೆಂಕಟರಾವ್ ನಾಡಗೌಡ ಸಿಂಧನೂರಿನ ಮೊದಲ ಮಿನಿಸ್ಟರ್…!

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-06-06 at 2.54.45 PM
ರಾಯಚೂರು. ಜೂ.06 : ಜಿಲ್ಲೆಯ ಸಹಕಾರಿ ಕ್ಷೇತ್ರದ ಧುರೀಣ ಹಾಗೂ ಸಿಂಧನೂರು ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರಿಗೆ ಸಚಿವ ಸ್ಥಾನ ಒಲಿದಿದೆ. ಈ ಮೂಲಕ ಸಿಂಧನೂರಿನ ಶಾಸಕರೊಬ್ಬರು ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಸಚಿವರಾಗಿದ್ದಾರೆ ಈ ಮೂಲಕ ಸಿಂಧನೂರು ಕ್ಷೇತ್ರದಿಂದ ಗೆದ್ದವರು ಸಚಿವರಾಗುವದಿಲ್ಲ ಎನ್ನುವ ಶಾಪ ವಿಮೋಚನೆಯಾದಂತಾಗಿದೆ . ಈ ಸಂದರ್ಭದಲ್ಲಿ ನಾಡಗೌಡರ ಕುರಿತ ಕಿರು ಪರಿಚಯ ಇಲ್ಲಿದೆ. ಭಾರತೀಯ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿ 1995ರಿಂದ ಕಾರ್ಯನಿರ್ವಹಿಸುತ್ತಿರುವ ವೆಂಕಟರಾವ್ ನಾಡಗೌಡ ಅವರು ಕೆಒಎಫ್ ನಿರ್ದೇಶಕರಾಗಿ ಹಾಗೂ ಈ ಹಿಂದೆ ರಾಜ್ಯ ಸಹಕಾರ ಒಕ್ಕೂಟ, ರಾಷ್ಟ್ರೀಯ ಡೈರಿ ಸಹಕಾರಿ ಒಕ್ಕೂಟದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಸಂಸ್ಥಾನದ ರಾಜ ವಂಶಸ್ಥರಾದ ವೆಂಕಟರಾವ್ ನಾಡಗೌಡ 1954ರ ಜನವರಿ5 ರಂದು ಜನಿಸಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಿರುವ ವೆಂಕಟರಾವ್ ನಾಡಗೌಡರು, ಎಲ್ವಿಡಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.

ಜವಳಗೇರಾ ಮಂಡಲ ಪಂಚಾಯಿತಿ ಪ್ರಧಾನರಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿ, ಜನತಾ ದಳದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಾವ್ ನಾಡಗೌಡರು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿಯನ್ನು 14,874 ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ವಿರುದ್ಧ 18,318 ಮತಗಳಿಂದ ಪರಾಜಿತಗೊಂಡರು.

ಸೋಲಿನ ನಂತರವೂ ನಿರಾಸೆಗೊಳ್ಳದೆ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವುದು ಸೇರಿದಂತೆ ರೈತರ ಸಮಸ್ಯೆಗಳ ಮೂಲಕ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ರು.

ಅಂತೆಯೇ ಇತ್ತೀಚೆಗೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ವಿರುದ್ಧ 1,597 ಮತಗಳ ಅಂತರದಿಂದ ಗೆಲುವು ಸಾಧಿಸಿ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಸಿಂಧನೂರು ಕ್ಷೇತ್ರಕ್ಕೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕ್ಷೇತ್ರದ ಜನರ ಅಸಮಾಧಾನವನ್ನು ಸಮ್ಮಿಶ್ರ ಸರ್ಕಾರ ದೂರ ಮಾಡಿದೆ. ಜಿಲ್ಲೆಯ ಶಾಸಕರೊಬ್ಬರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

Facebook Comments

Sri Raghav

Admin