ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಪಾಸ್‍ಗಾಗಿ ಪರದಾಟ, ಮುಖಂಡರ ಪೀಕಲಾಟ

ಈ ಸುದ್ದಿಯನ್ನು ಶೇರ್ ಮಾಡಿ

Glass-House

ಬೆಂಗಳೂರು, ಜೂ.6-ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಮುಖಂಡರೂ ಸಹ ಪಾಸ್‍ಗಾಗಿ ಪರದಾಡಿರುವ ಪ್ರಸಂಗ ನಡೆಯಿತು. ಕಾಂಗ್ರೆಸ್-ಜೆಡಿಎಸ್ ಉಭಯ ಪಕ್ಷಗಳ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೇವಲ 1500 ಪಾಸ್‍ಗಳನ್ನು ಮಾತ್ರ ಮಾಡಿಸಿದ್ದು, ಇದರಲ್ಲಿ ಶಾಸಕರಿಗೆ ಸುಮಾರು 30 ಹಾಗೂ ನೂತನ ಸಚಿವರ ತಲಾ 50ರಂತೆ ನೀಡಲಾಗಿತ್ತು.

ಹೀಗಾಗಿ ಎರಡೂ ಪಕ್ಷಗಳ ಮುಖಂಡರ ಅಭಿಮಾನಿಗಳು, ಕಾರ್ಯಕರ್ತರು ಪಾಸ್‍ಗಾಗಿ ರಾಜಭವನದ ಮುಂದೆಯೇ ಗಲಾಟೆ ಮಾಡಿಕೊಂಡರು. ಒಂದಿಷ್ಟು ಮಂದಿಗೆ ಪಾಸ್ ದೊರಕಿದ್ದರೂ ನೇರವಾಗಿ ರಾಜಭವನದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಪೊಲೀಸರ ಹಾಗೂ ಒಳಪ್ರವೇಶಿಸುವವರ ನಡುವೆ ತಳ್ಳಾಟ, ನೂಕಾಟವೂ ನಡೆಯಿತು.

ಇನ್ನು ಕೆಲವು ಪಾಸ್ ತಂದಿದ್ದರೂ ಸಹ ಪ್ರಯೋಜನವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಣ ಅವರಿಗೆ ನೀಡಿದ್ದ ಪಾಸ್ ಈಗಾಗಲೇ ಬಳಕೆಯಾದ ಪಾಸ್‍ಗಳಾಗಿದ್ದವು. ಪಾಸ್‍ಗಳ ಕವರ್ ಇದ್ದರೂ ಒಳಗಿನ ಪಾಸ್(ಹರಿದಿತ್ತು) ಬಳಸಿದ್ದಾಗಿತ್ತು. ಆದ್ದರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಣ್ತುಂಬಿಕೊಳ್ಳಲು ಬಂದ ಕಾರ್ಯಕರ್ತರು ನಿರಾಸೆಯಿಂದ ಪರದಾಡುವಂತಾಯಿತು. ಸ್ವತಃ ಎರಡೂ ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಪಾಸ್ ನೀಡಲು ಸಾಧ್ಯವಾಗದೆ ಪಾಸ್‍ಗಾಗಿ ಅವರೂ ಒದ್ದಾಡಿದರು.  ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ತಮ್ಮ ಬೆಂಬಲಿಗರಿಗೆ ಪಾಸ್ ಕೊಡಿಸಲು ಮುಂದಾದರಾದರೂ ಅದು ಸಾಧ್ಯವಾಗದೆ ಹೋಯಿತು.

ಅಭಿಮಾನಿಗಳ ಸಾಗರ :

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.  ರಾಜಭವನದ ರಸ್ತೆಯುದ್ಧಕ್ಕೂ ಎರಡೂ ಬದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭಿಮಾನಿಗಳು ನೆರೆದಿದ್ದರು, ಸಚಿವರ ಪ್ರಮಾಣವಚನ ಸ್ವೀಕಾರ ಕಣ್‍ತುಂಬಿಕೊಳ್ಳಲು ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ರಾಜಭವನದ ಒಳಭಾಗದಲ್ಲಿ ಎಲ್ಲರಿಗೂ ಜಾಗ ಸಾಕಾಗದ ಕಾರಣ ರಾಜಭವನದ ಮುಂಭಾಗದಲ್ಲಿ ಎಲ್‍ಇಡಿ ಪರದೆಗಳನ್ನು ಅಳವಡಿಸಿ ಸಮಾರಂಭವನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಮಾಡಲಾಗಿತ್ತು.

Facebook Comments

Sri Raghav

Admin