ಅನಾಥ ಮಗುವಿಗೆ ಅಮ್ಮನಾದ ಕಾನ್ಸ್ಟೆಬಲ್ ಅರ್ಚನಾ

ಈ ಸುದ್ದಿಯನ್ನು ಶೇರ್ ಮಾಡಿ

Archana--01

ಹುಟ್ಟಿದ್ದು ದೇವಕಿಯ ಗರ್ಭದಲ್ಲಿ-ಬೆಳೆದದ್ದು ಯಶೋಧೆಯ ಮಡಿಲಲ್ಲಿ. ಆಡಿದ್ದು ಗೋಪಾಲಕರ ನಡುವೆ. ಇದು ಜಗನ್ನಾಟಕ ಸೂತ್ರಧಾರ ಶ್ರೀಕೃಷ್ಣನ ಲೀಲೆ. ಕೆಲವರು ಇವನನ್ನು ದೇವಕೀನಂದನಾ ಯ ವಿದ್ಮಹೇ ಎಂದು ಪ್ರಾರ್ಥಿಸಿದರೆ ಉಳಿದವರು ಜಗದೋದ್ಧಾರನ ಆಡಿಸಿದಳೆಶೋಧೆ ಎಂದು ಹಾಡಿ ಕೊಂಡಾಡುತ್ತಾರೆ.
ಈ ಲೀಲೆಯ ಹಿಂದೆ ಒಂದು ದೊಡ್ಡ ಸಂದೇಶವಿದೆ. ಇಲ್ಲಿ ಯಾರು ಯಾರಿಗೂ ಅನಿವಾರ್ಯವಲ್ಲ, ಎಲ್ಲರನ್ನೂ ನೋಡಿಕೊಳ್ಳಲು ಅವನಿದ್ದಾನೆ. ತೇನವಿನಾ ತೃಣಮಪಿ ನ ಚಲತಿ ಅನ್ನುವಂತೆ, ಅವನ ಸಂಕಲ್ಪವಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.

ದೇವರ ಅಸ್ತಿತ್ವ ಸುಳ್ಳು, ಎಲ್ಲವೂ ನನ್ನಿಂದ, ನಾನೇ ಎಲ್ಲ ಎಂಬ ಅಹಮಿಕೆ ತಾಂಡವವಾಡುತ್ತಿರುವ ಈ ದಿನಗಳಲ್ಲಿ ನಾನಿದ್ದೇನೆ ಎಂದು ಆ ಸರ್ವಶಕ್ತ ಸಾಬೀತುಮಾಡುತ್ತಲೇ ಇರುತ್ತಾನೆ. ಶ್ರೀಕೃಷ್ಣ ಹುಟ್ಟಿದಾಗ ದೇವಕಿ, ಯಶೋಧೆಯ ಎದೆ ಹಾಲು ಕುಡಿಯಲಿಲ್ಲ. ಪೂತನಿಯ ಸ್ತನ್ಯಪಾನ ಮಾಡಿದ. ನಾನು ಶ್ರೀಕೃಷ್ಣನ ತಾಯಿಯಾಗಬಾರದೆ ಎಂದು ಪೂತನಿ ಶತಮಾನಗಳ ಕಾಲ ತಪಸ್ಸು ಮಾಡಿದ್ದಳು. ಈ ಮೂವರೂ ಆ ಭಗವಂತನ ಮಾತೃ ಸ್ವರೂಪಿಗಳಲ್ಲವೆ? ನೀನು ಬೇರೆ ನಾನು ಬೇರೆ ಎಂದು ಭೇದ ಮಾಡುವವರಿಗೆ ಇದು ಸೂಕ್ತ ಪಾಠ.

ಈ ಪ್ರಪಂಚದಲ್ಲಿ ಯಾರೂ ಅನಾಥರಲ್ಲ… ಅನಾಥ ಬಂಧುವಾಗಿ ನಾನಿದ್ದೇನೆ ಎಂಬ ಮಾತಿಗೆ ಬೆಂಗಳೂರು ಮಹಾನಗರದಲ್ಲಿ ಮೊನ್ನೆ ನಡೆದ ಘಟನೆಯೇ ಸಾಕ್ಷಿ. ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹತ್ತಿರ ಇರುವ ಪೊದೆಯೊಂದರಲ್ಲಿ ಹಸುಗೂಸೊಂದು ಆಕ್ರಂದನ ಮಾಡುತ್ತಿದೆ. ಆ ಮಗು ಯಾರದು, ಯಾವ ಜಾತಿ, ಯಾವ ಧರ್ಮ, ಶ್ರೀಮಂತರ ಮಗುವೋ, ಬಡವರ ಮಗುವೋ ಅನ್ನುವುದು ಯಾರಿಗೂ ತಿಳಿಯದು. ಪ್ರಕೃತಿ ಸಹಜವಾಗಿ ಜನಿಸಿದ ಮಗುವು ಹೆತ್ತವಳಿಗೆ ಬೇಡವಾಯಿತೋ ಏನೋ.

ಆ ಮಗು ಅನಾಥವೆ? ಅದಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲವೆ? ಅದು ಅತ್ತು ಹಾಗೇ ಸಾಯಬೇಕೆ? ಇಲ್ಲ. ಅನಾಥ ಎಂಬ ಪದಕ್ಕೆ ಅವಕಾಶವೇ ಇಲ್ಲ. ಯಾವುದೋ ರೂಪದಲ್ಲಿ ಬಂದ ಭಗವಂತ ನಾನಿದ್ದೇನೆ ಅಂದ.ಚಿಂದಿ ಆಯುತ್ತ ಬಂದ ವ್ಯಕ್ತಿಯೊಬ್ಬನಿಗೆ ಕಂದನ ಆಕ್ರಂದನ ಕೇಳಿಸಿತು. ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ಸುದ್ದಿ ಮುಟ್ಟಿತು. ಹೊಯ್ಸಳ ಗಸ್ತುವಾಹನ ತಕ್ಷಣ ಸ್ಥಳಕ್ಕೆ ಬಂತು. ಅದರಲ್ಲಿದ್ದವರು ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ನಾಗೇಶ್ ಮತ್ತು ಕಾನ್ಸ್‍ಟೇಬಲ್ ಅರ್ಚನಾ.ಹೊಕ್ಕಳ ಬಳ್ಳಿಯನ್ನೂ ಕತ್ತರಿಸದೆ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿಟ್ಟಿದ್ದ ಮಗುವನ್ನು ಕಂಡ ಕೂಡಲೇ ನಾಲ್ಕು ತಿಂಗಳ ಬಾಣಂತಿಯಾಗಿದ್ದ ಅರ್ಚನಾ ಅವರಲ್ಲಿ ದೈವತ್ವ ಮೂಡಿತ್ತು. ಮಾತೃ ಹೃದಯ ಜಾಗೃತವಾಯಿತು. ಸ್ತನಗಳಲ್ಲಿ ಕ್ಷೀರಾಮೃತ ಸ್ರವಿಸಿತು.

ಅಳುತ್ತಿದ್ದ ಮಗುವನ್ನು ಎರಡೂ ತೋಳುಗಳಿಂದ ಎತ್ತಿಕೊಂಡ ಅರ್ಚನಾ, ಪೊಲೀಸ್ ಠಾಣೆಗೆ ಬಂದರು. ಆ ಕಂದನಿಗೆ ಅಮೃತಪಾನ ಮಾಡಿಸಿದರು. ಹಾಲು ಕುಡಿದ ಆ ಹಸುಗೂಸು ಅಳು ನಿಲ್ಲಿಸಿ ಆನಂದದಿಂದ ಕೈಕಾಲಾಡಿಸತೊಡಗಿತು.ಇದೆಂಥಹ ದೈವಲೀಲೆ… ಎಂತಹ ಅದ್ಭುತ ಮಾನವೀಯತೆ! ಕುಲ-ಗೋತ್ರ ಯಾವುದೂ ಇಲ್ಲದೆ ಅನಾಥವಾಗಿ ಸಾಯಬೇಕಾಗಿದ್ದ ಮಗುವಿಗೆ ಅಮೃತ ಉಣಿಸಿದವರು ಯಾರು? ಅದಕ್ಕೊಂದು ಕುಲ-ಗೋತ್ರ ಆದವರು ಯಾರು? ಅವರೇ ಆ ಮಹಾತಾಯಿ ಅರ್ಚನಾ. ಆ ಮಗುವಿನ ಮಾತೃ ಸ್ವರೂಪಿ. ಅನಾಥ ಬಂಧು, ಕಾರುಣ್ಯ ಸಿಂಧು.

ಆ ಘಟನೆಯು ಮಾನವೀಯತೆಗೆ, ದೈವತ್ವಕ್ಕೆ ದೊಡ್ಡ ನಿದರ್ಶನ. ರಾಮಾಯಣ, ಮಹಾಭಾರತ, ಕಲಿಯುಗ ಯಾವುದೂ ಸುಳ್ಳಲ್ಲ ಎಂದು ಸಾಬೀತು ಮಾಡಿದ ಘಟನೆ. ಲೌಕಿಕಕ್ಕೆ ಬರುವುದಾದರೆ, ಪೊಲೀಸರು ಅಂದರೆ ಬರೀ ಲಾಠಿ, ಬೂಟಿನ ನೆನಪಾಗುತ್ತದೆ. ಅದು ಶುದ್ಧ ತಪ್ಪು. ಆ ಇಲಾಖೆಯಲ್ಲೂ ಮಾನವೀಯತೆಯಿಂದ ಕೂಡಿದ ಹೃದಯಗಳಿವೆ. ಇದಕ್ಕೆ ಅರ್ಚನಾ ದೊಡ್ಡ ನಿದರ್ಶನ. ಸ್ತನ್ಯಪಾನ ಮಾಡಿಸಿದ ನಂತರ ಆ ಮಗುವಿಗೆ ಸ್ನಾನ ಮಾಡಿಸಿದ ಪೊಲೀಸರು, ಹೊಸಬಟ್ಟೆ ಖರೀದಿಸಿ ತಂದು ಅದಕ್ಕೆ ತೊಡಿಸಿ ಸಂಭ್ರಮಿಸಿದರು.

ಅರ್ಚನಾರ ಹಿನ್ನೆಲೆ:
ಅರ್ಚನಾ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‍ಟೆಬಲ್ ಆಗಿದ್ದಾರೆ. ಇವರು ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದವರು. ಬಿಎ ಪದವೀಧರರಾಗಿರುವ ಇವರು ಎರಡು ವರ್ಷಗಳ ಹಿಂದೆ ಸುನಿಲ್‍ಕುಮಾರ್ ಎಂಬುವವರನ್ನು ಮದುವೆಯಾದರು. ಈಗ ಇವರು ನಾಲ್ಕು ತಿಂಗಳ ಮಗುವಿನ ತಾಯಿ. ಈ ಮಾನವೀಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಚನಾ, ಆ ಮಗುವಿಗೆ ಎದೆಹಾಲು ಕುಡಿಸುವ ಸೌಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಅನ್ನುತ್ತಾರೆ. ಆ ಮಗುವಿಗೆ ಹಾಲುಣಿಸು ವಾಗ ಅದು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಕಂದ ಎಂಬ ಭಾವನೆ ಇತ್ತು ಅನ್ನುವಾಗ ಆ ಮಾತನ್ನು ಕೇಳುವವರ ಕಣ್ಣುಗಳು ಒದ್ದೆಯಾಗಿದ್ದವು. ಮಾನವೀಯತೆಯೆಂದರೆ ಇದಲ್ಲವೇ…

ಈ ಘಟನೆಯಿಂದ ಪೊಲೀಸರ ಬಗ್ಗೆ ಜನರಿಗಿದ್ದ ಧೋರಣೆ ಬದಲಾಗಿದೆ. ಅರ್ಚನಾರಂಥವರನ್ನು ಹೊಂದಿರುವ ಇಲಾಖೆಯನ್ನು ಹೊಗಳುತ್ತಿದ್ದಾರೆ. ರಾಜ್ಯದ ನಾನಾ ಮೂಲೆಗಳಿಂದ ಪ್ರಶಂಸೆಯ ಹೊಳೆ ಹರಿದು ಬರುತ್ತಿದೆ. ಅರ್ಚನಾ ಅವರ ಮಾನವೀಯತೆ ಮೆಚ್ಚತಕ್ಕದ್ದು ಎಂದು ಡಿಸಿಪಿ ಬೋರಲಿಂಗಯ್ಯ ಸೇರಿದಂತೆ ಹಲವರು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

ಮಗುವಿಗೆ ಹಾಲುಣಿಸಿ ಧನ್ಯತೆ ಮೆರೆದದ್ದು ಮಾತ್ರವಲ್ಲದೆ, ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ತುಂಬಾ ಒಳ್ಳೆಯ ಭಾವನೆ ಮೂಡಿಸಿದ ಅರ್ಚನಾರನ್ನು ಸರ್ಕಾರವು ಸನ್ಮಾನಿಸಬೇಕು. ಇದು ಒಬ್ಬ ವ್ಯಕ್ತಿಗೆ ಮಾಡುವ ಸನ್ಮಾನವಲ್ಲ. ಮಾನವೀಯತೆಗೆ, ತಾಯ್ತನಕ್ಕೆ ಮಾಡುವ ಗೌರವ.ಅರ್ಚನಾರ ಮಾತೃ ಹೃದಯವು ಈಗಾಗಲೇ ಜನಜಾಗೃತಿ ಮೂಡಿಸಿದೆ. ಭಗವಂತನೇ ಬಂದು ಆ ಮಗುವಿಗೆ ಹಾಲುಣಿಸಿ ಜೀವ ಕಾಪಾಡಿದ ಅನ್ನುತ್ತಿದ್ದಾರೆ. ನಾನು, ನನ್ನದು, ನನ್ನಿಂದ ಅನ್ನುವುದು ಸುಳ್ಳು. ಇದನ್ನೆಲ್ಲ ಮೀರಿದ ಮಹಾನ್ ಶಕ್ತಿ ಸ್ವರೂಪಿ ಇದ್ದಾನೆ ಎಂಬ ಸತ್ಯದ ಮೇಲೆ ಆವರಿಸಿಕೊಂಡಿದ್ದ ಧೂಳನ್ನು ಅರ್ಚನಾ ತಮ್ಮ ಕೈಲಾದ ಮಟ್ಟಿಗೆ ಒರೆಸಿದ್ದಾರೆ.

ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಹಿಳೆ. ಪೊಲೀಸ್ ಮುಖ್ಯಸ್ಥರೂ ಮಹಿಳೆ. ಅರ್ಚನಾ ಅವರು ಈಗ ಪೊಲೀಸ್ ವ್ಯವಸ್ಥೆಗೆ ಮುಕುಟಪ್ರಾಯರಾಗಿದ್ದಾರೆ. ಅವರಿಗೆ ಬಡ್ತಿ ಕೊಡಬೇಕು, ರಾಜ್ಯ ಪ್ರಶಸ್ತಿ ಕೊಡಬೇಕು. ಇದು ಒಳ್ಳೆ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಇತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗುತ್ತದೆ.ಅನಾಥನಾಥ, ದೀನಬಂಧು ಎಂದು ಜನರು ಕೊಂಡಾಡುವ ಪರಮಾತ್ಮ ಎಲ್ಲೋ ಅವಿತು ಕುಳಿತಿಲ್ಲ. ಅವನು ನಮ್ಮ ನಡುವೆಯೇ ಇದ್ದಾನೆ. ಅರ್ಚನಾರಂಥವರ ರೂಪದಲ್ಲಿ ಬಂದು ನಾನಿರುವಾಗ ನೀವ್ಯಾಕೆ ಅನಾಥರು ಎಂದು ಹೇಳುತ್ತಿರುತ್ತಾನೆ. ಅಮ್ಮ ಎಂಬ ಪದದ ಅನ್ವರ್ಥವಾದ ಅರ್ಚನಾ ಧನ್ಯರು.

Facebook Comments

Sri Raghav

Admin