ಸಚಿವ ಸ್ಥಾನ ಸಿಗದ ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ

ಈ ಸುದ್ದಿಯನ್ನು ಶೇರ್ ಮಾಡಿ

Congress-Rebel-MLA

ಬೆಂಗಳೂರು, ಜೂ.7- ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡು ಕಾಂಗ್ರೆಸ್‍ನ ಬಹಳಷ್ಟು ಶಾಸಕರು ರಾಜೀನಾಮೆ ಕೊಡುವ ಬೆದರಿಕೆ ಹಾಕಿರುವುದು ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದೇ ಸಂದರ್ಭದಲ್ಲಿ ಬಿಜೆಪಿ ಅತೃಪ್ತ ಶಾಸಕರನ್ನು ಸಂಪರ್ಕಿಸುತ್ತಿರುವ ಬೆಳವಣಿಗೆಗಳು ನಡೆದಿವೆ.  ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಎಂ.ಬಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಬಿ.ಸಿ.ಪಾಟೀಲ್, ಡಾ.ಎಸ್.ಟಿ.ಸುಧಾಕರ್, ಭೀಮನಾಯಕ್, ಆನಂದ್‍ಸಿಂಗ್, ಶಿವಳ್ಳಿ ಸೇರಿದಂತೆ ಮತ್ತಿತರ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಸಂಪುಟ ವಿಸ್ತರಣೆಯಿಂದ ಉಂಟಾಗಿರುವ ಅತೃಪ್ತಿಯ ಲಾಭ ಪಡೆಯಲು ಬಿಜೆಪಿ ರಂಗ ಪ್ರವೇಶ ಮಾಡಿದೆ. ಸರ್ಕಾರ ರಚನೆಯ ಆರಂಭದಲ್ಲಿ ಯಡಿಯೂರಪ್ಪ ಅವರು ವಿಶ್ವಾಸಮತಯಾಚನೆ ಮಾಡುವಾಗ ಆಪರೇಷನ್ ಕಮಲ ನಡೆಸಲು ಮುಂದಾಗಿ ಕೈ ಸುಟ್ಟುಕೊಂಡಿರುವ ಬಿಜೆಪಿ, ಈಗ ಅತ್ಯಂತ ಹೆಚ್ಚರಿಕೆಯ ಹೆಜ್ಜೆ ಹಾಕಲು ಅತೃಪ್ತರ ಪೈಕಿ ನಿಜವಾದ ಅವಕಾಶ ವಂಚಿತರನ್ನು ಗುರುತಿಸಿ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

ಈಗಾಗಲೇ ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್‍ನ ಅತೃಪ್ತ ನಾಯಕರ ಜತೆ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಯಾವುದೇ ಆಮಿಷಗಳನ್ನು ಒಡ್ಡದೆ ಕೇವಲ ಅನುಕಂಪ ತೋರಿಸಿರುವ ಬಿಜೆಪಿ ನಾಯಕರು, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ದೃಢ ನಿರ್ಧಾರ ತೆಗೆದುಕೊಂಡರೆ ಮುಂದಿನ ಮಾತುಕತೆ ನಡೆಸಬಹುದು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.  ಇದನ್ನೇ ಮುಂದಿಟ್ಟುಕೊಂಡು ಅತೃಪ್ತ ಶಾಸಕರು ಕಾಂಗ್ರೆಸ್‍ನ ಹಿರಿಯ ನಾಯಕರನ್ನು ಬ್ಲಾಕ್‍ಮೇಲ್ ಮಾಡುವ ಪ್ರಯತ್ನ ಮಾಡಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳಿಂದಲೂ ಒಟ್ಟು 118 ಶಾಸಕರಿದ್ದು, ಸರ್ಕಾರ ಸದ್ಯಕ್ಕೆ ಸ್ಪಷ್ಟ ಬಹುಮತ ಹೊಂದಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಅತೃಪ್ತಿ ವಿಪರೀತಕ್ಕೆ ಹೋಗಿ ಕೆಲವರು ರಾಜೀನಾಮೆ ನೀಡಿದರೆ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗುವ ಆತಂಕವಿದೆ. ಅದಕ್ಕಾಗಿ ಬಾಕಿ ಇರುವ ಆರು ಸಚಿವ ಸ್ಥಾನಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‍ನ ಹಿರಿಯ ನಾಯಕರು ಅತೃಪ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಅತೃಪ್ತರಾಗಿರುವ ಕಾಂಗ್ರೆಸ್‍ನ ಕೆಲ ಹಿರಿಯ ಶಾಸಕರು, ಪಕ್ಷ ನಮಗೆ ಸಚಿವ ಸ್ಥಾನವನ್ನೂ ನೀಡಿಲ್ಲ. ಕನಿಷ್ಠ ಪಕ್ಷದ ಮುಖಂಡರು ನಮ್ಮನ್ನು ಸಂಪರ್ಕಿಸಿ ಸಮಾಧಾನ ಹೇಳುವ ಪ್ರಯತ್ನ ಮಾಡಿಲ್ಲ. ಬಿಜೆಪಿ ಪಾಳಯದಿಂದ ನಮಗೆ ನಿರಂತರ ಕರೆಗಳು ಬರುತ್ತಿವೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin