ಪುಷ್ಪಗಿರಿ ಬೆಟ್ಟದ ಬಳಿ ಸುಟ್ಟು ಕರಕಲಾದ ಕಾರು, ಇಬ್ಬರ ಸಜೀವ ದಹನ, ಕೊಲೆ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಜೂ.9- ತಾಲ್ಲೂಕಿನ ಪುಷ್ಪಗಿರಿ ಬೆಟ್ಟದ ಬಳಿ ಕಾರೊಂದರಲ್ಲಿ ಇಬ್ಬರನ್ನು ಸಜೀವವಾಗಿ ಸುಟ್ಟು ಹಾಕಿರುವ ಘಟನೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾರಿನಲ್ಲಿದ್ದವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಇಬ್ಬರ ಮೃತದೇಹಗಳು ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು ಸಮೀಪದ ಪುಷ್ಪಗಿರಿ ಬೆಟ್ಟದಲ್ಲಿ ರಾತ್ರಿ 8.30ರಲ್ಲಿ ಅಪರಿಚಿತ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಸ್ಥಳೀಯರು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಕಾರಿನೊಳಗೆ ಇಬ್ಬರ ದೇಹಗಳು ಹೊತ್ತಿ ಉರಿಯುವುದನ್ನು ಕಂಡು ತಕ್ಷಣ ಹಳೆಬೀಡು ಪೊಲೀಸರಿಗೆ ತಿಳಿಸಿದ್ದಾರೆ.

Car-Fire

ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕದಳಕ್ಕೆ ವಿಷಯ ಮುಟ್ಟಿಸಿದ್ದಾರೆ. ಅಷ್ಟರಲ್ಲಾಗಲೇ ಕಾರು ಭಾಗಶಃ ಹೊತ್ತಿ ಉರಿದಿತ್ತು. ಅಲ್ಲದೆ ಕಾರಿನಲ್ಲಿದ್ದ ಇಬ್ಬರ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಕಾರು ಯಾರದು ಹಾಗೂ ಕಾರಿನಲ್ಲಿದ್ದವರು ಯಾರೆಂಬುದು ತಿಳಿದು ಬಂದಿಲ್ಲ. ಸುಟ್ಟು ಕರಕಲಾದ ಈ ಕಾರಿಗೆ ನಂಬರ್ ಪ್ಲೇಟ್ ಸಹ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.  ಸುಟ್ಟು ಕರಕಲಾದ ಕಾರಿನ ಪಕ್ಕದಲ್ಲಿ ರಾತ್ರಿ ಪಾರ್ಟಿ ಮಾಡಿರುವ ಕುರುಹುಗಳು ಕಂಡು ಬಂದಿದ್ದು, ಸ್ಥಳದಲ್ಲಿ ಬಿಯರ್‍ಬಾಟಲಿ, ನೀರಿನ ಬಾಟಲಿಗಳು ಪತ್ತೆಯಾಗಿವೆ.

WhatsApp Image 2018-06-09 at 10.03.29 AM

ದುಷ್ಕರ್ಮಿಗಳು ಬೇರೆಡೆ ಎಲ್ಲೋ ಇವರಿಬ್ಬರನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿಕೊಂಡು ಈ ಸ್ಥಳಕ್ಕೆ ಬಂದು ಪಾರ್ಟಿ ಮಾಡಿ ನಂತರ ಕಾರಿಗೆ ಬೆಂಕಿ ಹಚ್ಚಿದ್ದಾರೋ ಅಥವಾ ರಾತ್ರಿ ಒಟ್ಟಾಗಿ ಸೇರಿ ಪಾರ್ಟಿ ಮಾಡಿ ಗಲಾಟೆ ಮಾಡಿಕೊಂಡು ಕಾರಿನೊಳಗೆ ಇಬ್ಬರನ್ನು ಕೂಡಿ ಹಾಕಿ ಸಜೀವವಾಗಿ ಬೆಂಕಿ ಹಚ್ಚಿ ಮತ್ತೊಂದು ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್ ವಾಡ್, ಅಡಿಷನಲ್ ಎಸ್‍ಪಿ ನಾರಾಯಣ್, ವೃತ್ತ ನಿರೀಕ್ಷಕ ಯೋಗೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp Image 2018-06-09 at 10.03.28 AM

ಹಳೇಬೀಡು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಉನ್ನತ ತನಿಖೆ ನಡೆಸಲಾಗುವುದು ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.  ದುಷ್ಕರ್ಮಿಗಳು ಕಾರಿನಲ್ಲಿ ಎಷ್ಟು ಗಂಟೆಗೆ ಈ ಪ್ರದೇಶಕ್ಕೆ ಬಂದಿದ್ದರು. ಕೊಲೆಯಾಗಿರುವ ಇಬ್ಬರು ಎಲ್ಲಿಯವರು ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ಕಲೆ ಹಾಕಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡ ಕಾರ್ಯೋನ್ಮುಖವಾಗಿದೆ.WhatsApp Image 2018-06-09 at 10.03.40 AM

WhatsApp Image 2018-06-09 at 10.03.39 AM

Facebook Comments

Sri Raghav

Admin